ಹುಬ್ಬಳ್ಳಿ, ಜೂ 20: ಭಾರೀ ಕುತೂಹಲ ಕೆರಳಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಗದ್ದುಗೆಗಳು ಬಿಜೆಪಿ ತೆಕ್ಕೆಯಲ್ಲೇ ಉಳಿಯುವ ಸಾಧ್ಯತೆಗಳು ನಿರಾತಂಕವಾಗಿದ್ದು, ಬಿಜೆಪಿಯ ವೀಣಾ ಭಾರದ್ವಾಡ ಮೇಯರ್ ಆಗಿ ಹಾಗೂ ಸತೀಶ್ ಹಾನಗಲ್ ಉಪ ಮೇಯರ್ ಆಗಿ ಪಟ್ಟವನ್ನಲಂಕರಿಸುವುದು ಬಹುತೇಕ ಖಚಿತವಾಗಿದೆ.
ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದೆ.
ಧಾರವಾಡ ಮಹಾನಗರ ಪಾಲಿಕೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಭಾಭವನದಲ್ಲಿ ಇಂದು ಮುಂಜಾನೆ ನಡೆದ ನಾಮಪತ್ರ ಸ್ವೀಕಾರ ಕಾಲಕ್ಕೆ ಬಿಜೆಪಿಯ ಸದಸ್ಯೆ ವೀಣಾ ಭಾರದ್ವಾಡ ಮೇಯರ್ ಸ್ಥಾನಕ್ಕೆ ಹಾಗೂ ಸತೀಶ್ ಹಾನಗಲ್ ಉಪಮೇಯರ್ ಸ್ಥಾನಕ್ಕೆ ತಮ್ಮ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್‍ನ ಸುವರ್ಣ ಕಲ್ಲಕುಂಟ್ಲ ಮೇಯರ್ ಸ್ಥಾನಕ್ಕೆ ಹಾಗೂ ರಾಜಶೇಖರ ಕಮತಿ ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಎಐಎಂಐಎಂ ಪಕ್ಷದ ವಹೀದಾಖಾನಂ ಅಲ್ಲಾಭಕ್ಷ ಕಿತ್ತೂರ ಮೇಯರ್ ಸ್ಥಾನಕ್ಕೆ, ನಜೀರ ಅಹ್ಮದ ಹೊನ್ಯಾಳ ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಅಡ್ಡಮತದಾನದ ಭೀತಿಯಲ್ಲಿದ್ದ ಬಿಜೆಪಿ ತನ್ನ ಬಹುತೇಕ ಪಾಲಿಕೆ ಸದಸ್ಯರುಗಳನ್ನೆಲ್ಲ ದಾಂಡೇಲಿಯ ರೆಸಾರ್ಟ್‍ಗೆ ಕಳಿಸಿದ್ದು, ಇಂದು ಮುಂಜಾನೆ ಅವರೆಲ್ಲ ಅಲ್ಲಿಂದ ಮರಳಿದರು.
ದಾಂಡೇಲಿಯಿಂದ ಒಂದೇ ಬಸ್‍ನಲ್ಲಿ ಬಂದ ಸದಸ್ಯರು ನಗರದ ಹೋಟೆಲ್‍ವೊಂದರತ್ತ ಹೋಗುವವರೆಗೂ ಇಡೀ ಬಸ್‍ಗೆ ಕಾರ್ಯಕರ್ತರ ಕಣ್ಗಾವಲು ಇರಿಸಿದ್ದುದು ಎದ್ದು ಕಾಣುತ್ತಿತ್ತು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸದಸ್ಯರ ಸಂಖ್ಯಾಬಲ:
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಒಟ್ಟು 82 ಸ್ಥಾನಗಳ ಪೈಕಿ 39 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ದೊಡ್ಡ ಪಕ್ಷವಾಗಿದ್ದು, ಕಾಂಗ್ರೆಸ್ 33 ಸ್ಥಾನ ಹೊಂದಿದೆ. ಎಐಎಂಐಎಂ ಮೂರು, ಜೆಡಿಎಸ್ ಒಂದು ಸ್ಥಾನ ಹೊದಿದ್ದು, ಆರು ಜನ ಪಕ್ಷೇತರರ ಪೈಕಿ ಮೂವರು ಬಿಜೆಪಿಯನ್ನು ಹಾಗೂ ಮೂವರು ಕಾಂಗ್ರೆಸ್ ಬೆಂಬಲಿಸಿದ್ದರು.
ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರ ಸಂಖ್ಯೆ ಸೇರಿಸಿ ಮೇಯರ್-ಉಪಮೇಯರ್ ಗದ್ದುಗೆ ತನ್ನದಾಗಿಸಿಕೊಳ್ಳಲು ಅಗತ್ಯದ ಸಂಖ್ಯಾಬಲ ಹೊಂದಿರುವ ಬಿಜೆಪಿ ಕಾಂಗ್ರೆಸ್‍ನ ಎಲ್ಲ ತಂತ್ರಗಾರಿಕೆಗೆ ಪ್ರತಿತಂತ್ರಗಾರಿಕೆ ರೂಪಿಸುತ್ತ ಬಂದಿದ್ದು, ತಾನೇ ಗದ್ದುಗೆ ಉಳಿಸಿಕೊಳ್ಳುವುದರಲ್ಲಿ ಬಹುತೇಕ ಯಶಸ್ಸು ಕಾಣಲಿದೆ.
ಚುನಾವಣಾ ಪ್ರಕ್ರಿಯೆ ನಿಗದಿತ ಸಮಯಾನುಸಾರ ನಡೆಯಲಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ನಿತೇಶ್ ಪಾಟೀಲ್ ಹೇಳಿದ್ದಾರೆ.
ಮತದಾನ, ಮತಗಳ ಎಣಿಕೆ ಸೇರಿ ಚುನಾವಣಾ ಪ್ರಕ್ರಿಯೆಯ ಹಂತಗಳು ಪೂರ್ಣಗೊಂಡ ನಂತರ ಜಯದ ಮಾಲೆ ಯಾರ ಕೊರಳು ಅಲಂಕರಿಸಿತೆಂಬುದು ಅಧಿಕೃತವಾಗಿ ಪ್ರಕಟಗೊಳ್ಳಲಿದೆ.
ಕೊನೆ ಘಳಿಗೆಯಲ್ಲಿ ಅಡ್ಡ ಮತದಾನ ಏನಾದರೂ ನಡೆದರೆ ಲೆಕ್ಕಾಚಾರಗಳು ತಲೆಕೆಳಗಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.