ಹು-ಧಾ ಮಾರುಕಟ್ಟೆಯಲ್ಲಿ ಜನಜಂಗುಳಿ : ವಾಹನಗಳ ಬೇಕಾಬಿಟ್ಟಿ ಓಡಾಟ

ಹುಬ್ಬಳ್ಳಿ, ಮೇ 28: ಧಾರವಾಡ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಮಧ್ಯೆ ಮೂರುದಿನಗಳ ಕಾಲ ಸಾರ್ವಜನಿಕರಿಗೆ ದಿನಸಿ ಹಾಗೂ ಮಾಂಸ ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. ಆದರೆ ಇದನ್ನೆ ನೆಪವಾಗಿಸಿಕೊಂಡು ಸಾರ್ವಜನಿಕರು ಹಾಗೂ ಹೆಚ್ಚಿನ ವಾಹನಗಳು ರಸ್ತೆಗಿಳಿದು ಬೇಕಾಬಿಟ್ಟಿಯಾಗಿ ಓಡಾಡುತ್ತಿರುವುದು ಕಂಡುಬಂತು.

ಮೇ 27, 28 ಹಾಗೂ 29 ರಂದು ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ದಿನಸಿ ಹಾಗೂ ಮಾಂಸ ಮಾರಾಟಕ್ಕೆ ಅನುಕೂಲ ಕಲ್ಪಿಸಿ ಆದೇಶಿಸಲಾಗಿದೆ. ಆದರೆ ಎರಡನೇ ದಿನವಾದ ಇಂದು ಮಾರುಕಟ್ಟೆ ಪ್ರದೇಶಗಳಲ್ಲಿ ಜನಜಂಗುಳಿಯಿಂದ ಕೂಡಿದೆ. ಸಾರ್ವಜನಿಕರು ಸಾಮಾಜಿಕ ಅಂತರವನ್ನು ಮರೆತು, ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆಯಲ್ಲಿ ತೊಡಗಿದ್ದರು.

ನಗರದ ದುರ್ಗದ್‍ಬೈಲ್, ಹಳೇ ಹುಬ್ಬಳ್ಳಿ, ಜನತಾ ಬಜಾರ್, ಶಿರೂರ್ ಪಾಕ್, ಕೇಶ್ವಾಪುರ ಸೇರಿದಂತೆ ಧಾರವಾಡದ ಸುಭಾಸ ರಸ್ತೆ, ಅಕ್ಕಿ ಪೇಟ್, ಜ್ಯುಬ್ಲಿ ವೃತ್ತಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಓಡಾಟ ಕಂಡುಬಂತು. ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಮರೆತು ದಿನಸಿ ಖರೀದಿಯಲ್ಲಿ ತೊಡಗಿದ್ದು, ಕೊರೊನಾ ನಿಯಂತ್ರಣಕ್ಕೆ ಕಡಿವಾಣವಿಲ್ಲದಂತೆ ಕಂಡುಬಂತು.

ಕೆಲವರು ಮಾಸ್ಕ್ ಸರಿಯಾಗಿ ಧರಿಸದೆ ಇದ್ದರೆ, ಮತ್ತೆ ಕೆಲವರು ಮಾಸ್ಕ್ ಇಲ್ಲದೆ ನಿರ್ಲಕ್ಷ್ಯದಿಂದ ಓಡಾಡುತ್ತಿದ್ದರು. ಹೆಚ್ಚಿನ ಜನಸಾಂದ್ರತೆಯಾಗಬಾರದೆಂದು ದಿನಸಿ ಹಾಗೂ ಮಾಂಸ ಖರೀದಿಗೆ ಸಮಯವನ್ನು ಮದ್ಯಾಹ್ನ 12 ಗಂಟೆಯವರೆಗೂ ವಿಸ್ತರಿಸಿ ಆದೇಶಿಸಲಾಗಿದೆ. ಆದರೆ ಇದಾವುದನ್ನೂ ಲೆಕ್ಕಿಸದೆ ಜನತೆ ಮಾರುಕಟ್ಟೆಯಲ್ಲಿ ಕೊರೊನಾ ನಿಯಮಗಳನ್ನು ಪಾಲಿಸದೆ ಇರುವುದು ಮತ್ತೆ ಆತಂಕವನ್ನು ತಂಡೊಡ್ಡಿದೆ.

ಖಾಕಿ ಸರ್ಪಗಾವಲು:
ಮಾರುಕಟ್ಟೆ ಪ್ರದೇಶದಲ್ಲಿ ದಿನಸಿ ಖರೀದಿಗಾರಿ ವಾಹನಗಳ ಭರಾಟೆ ಹೆಚ್ಚಾಗಿತ್ತಲ್ಲದೆ, ಹುಬ್ಬಳ್ಳಿಯ ಪ್ರಮುಖ ರಸ್ತೆಗಳಾದ ಚೆನ್ನಮ್ಮಾ ವೃತ್ತ, ಗೋಕುಲ್ ರಸ್ತೆ, ವಿದ್ಯಾನಗರ, ಕೇಶ್ವಾಪುರ ರಸ್ತೆ ಹಾಗೂ ಧಾರವಾಡದ ಜ್ಯುಬ್ಲಿ ವೃತ್ತ, ಕೋರ್ಟ್ ವೃತ್ತ, ಕೆಸಿಡಿ ವೃತ್ತ, ಹಳೇ ಬಸ್‍ನಿಲ್ದಾಣ ಪ್ರದೇಶಗಳಲ್ಲಿ ವಾಹನಗಳ ಭರಾಟೆ ಹೆಚ್ಚಾಗಿತ್ತು. ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಓಡಾಡುವುದು ಕಂಡುಬಂತು.

ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಜಮಾವಣೆಯಾಗಿದ್ದು, ಇಲ್ಲಿ ಪೊಲೀಸ್ ಸರ್ಪಗಾವಲು ಒದಗಿಸಿದ್ದು, ವಾಹನಗಳನ್ನು ಪೊಲೀಸರು ಒಂದೊಂದಾಗಿ ತಪಾಸಿಸಿ, ವಿಚಾರಿಸಿ ಕಳುಹಿಸಿದರಲ್ಲದೆ, ಅನವಶ್ಯಕವಾಗಿ ಓಡಾಡುವ ಕೆಲ ವಾಹನಗಳನ್ನು ವಶಪಡಿಸಿಕೊಂಡರು.