ಹು-ಧಾ ಪಾಲಿಕೆ ಗದ್ದುಗೆಗೆ ಕೈ- ಕಮಲ ಕಸರತ್ತು

ಹುಬ್ಬಳ್ಳಿ, ಜೂ ೧೭: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಜೂನ್ ೨೦ಕ್ಕೆ ನಿಗದಿಯಾಗಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸಿವೆ.
ಸದ್ಯ ಹು-ಧಾ ಮಹಾನಗರ ಪಾಲಿಕೆ ಆಡಳಿತ ಬಿಜೆಪಿಯ ಹಿಡಿತದಲ್ಲಿದೆ. ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ ಅಧಿಕಾರ ಎಲ್ಲಿ ಕೈತಪ್ಪುತ್ತದೆಯೋ ಎನ್ನುವ ದುಗುಡದಲ್ಲಿ ಬಿಜೆಪಿ ತನ್ನ ಕೆಲ ಪಾಲಿಕೆ ಸದಸ್ಯರನ್ನು ದಾಂಡೇಲಿ ರೆಸಾರ್ಟ್‌ಗೆ ನಿನ್ನೆ ಸಂಜೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದ್ದು, ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಎಡೆಮಾಡಿದೆ.
ಇತ್ತೀಚೆಗೆ ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್‌ನ ಕೆಲ ನಾಯಕರು ೫೦ ಲಕ್ಷದ ಆಮಿಷವೊಡ್ಡುತ್ತಿದ್ದಾರೆ ಎಂದು ಬಿಜೆಪಿಯ ಕೆಲ ನಾಯಕರು ಆರೊಪಿಸಿದ್ದರು. ಬಿಜೆಪಿ ಸದಸ್ಯರು ಆಮಿಷಕ್ಕೆ ಒಳಗಾಗುವುದಿಲ್ಲ. ಒಗ್ಗಟ್ಟಿನಿಂದ ಇದ್ದೇವೆ. ಮೇಯರ್, ಉಪಮೇಯರ್ ಬಿಜೆಪಿ ಸದಸ್ಯರೇ ಆಗಲಿದ್ದಾರೆ ಎಂದು ಧಾರವಾಡ ಜಿಲ್ಲಾ ಬಿಜೆಪಿ ಹೇಳಿತ್ತು.
ಸದ್ಯ ಚುನಾವಣೆಗೆ ಕೆಲವೇ ದಿನಗಳಿದ್ದು, ಅಧಿಕಾರದ ಗದ್ದುಗೆ ಯಾವ ಕಾರಣಕ್ಕೂ ಕೈತಪ್ಪಬಾರದು ಎಂದು ಬಿಜೆಪಿ ಕೆಲ ಪಾಲಿಕೆ ಸದಸ್ಯರನ್ನು ರೆಸಾರ್ಟ್‌ನತ್ತ ಕಳುಹಿಸಲಾಗಿದೆ ಎನ್ನಲಾಗಿದೆ.
ಅಲ್ಲದೆ ಬಿಜೆಪಿ ಸೂಚಿಸುವ ಮೇಯರ್, ಉಪಮೇಯರ್ ಅಭ್ಯರ್ಥಿಗಳಿಗೆನೇ ಮತ ನೀಡುವಂತೆ ಮಹಾನಗರ ಜಿಲ್ಲಾ ಅಧ್ಯಕ್ಷ ಸಂಜಯ್ ಕಪಟಕರ ಅವರು ಪಕ್ಷದ ಸದಸ್ಯರಿಗೆ ಈ ಹಿಂದೆ ವಿಪ್ ಸಹ ಜಾರಿಗೊಳಿಸಿದ್ದರು. ಆದರೂ ಅಡ್ಡಮತದಾನವಾಗಬಾರದು ಎಂಬ ಕಾರಣಕ್ಕೆ ಈ ಎಲ್ಲ ಕಸರತ್ತುಗಳು ನಡೆದಿವೆ ಎನ್ನಲಾಗಿದೆ.
ಒಟ್ಟು ೮೨ ಸದಸ್ಯರಿರುವ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ೩೯, ಕಾಂಗ್ರೆಸ್ ೩೩, ಎಐಎಂಐಎಂ ೩, ಪಕ್ಷೇತರರು ೬ ಹಾಗೂ ಜೆಡಿಎಸ್‌ನಿಂದ ಒಬ್ಬರು ಸದಸ್ಯರಿದ್ದಾರೆ. ಪಕ್ಷೇತರರಲ್ಲಿ ಮೂವರು ಬಿಜೆಪಿಗೆ ಬೆಂಬಲ ನೀಡಿದ್ದು ೪೨ ಬಲವಿದೆ. ಆದರೆ ಕಾಂಗ್ರೆಸ್ ಇನ್ನಿತರರ ಬೆಂಬಲ ಪಡೆದು ಅಧಿಕಾರ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದೆ.
ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ಇದೆ. ಜೂನ್ ೧೯ ರಂದು ಬಿಜೆಪಿ ಸಭೆ ನಡೆಸಿ ಈ ಸ್ಥಾನಗಳ ಅಭ್ಯರ್ಥಿಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ. ಅಂದಿನ ಸಭೆಯಲ್ಲಿ ಏನು ನಿರ್ಣಯ ಹೊರಬೀಳಲಿದೆ ಎಂಬುದನ್ನು ಸಹ ಕಾಯ್ದು ನೋಡಬೇಕಿದೆ. ಒಟ್ಟಾರೆ ಮುಂದಿನ ರಾಜಕೀಯ ಬೆಳವಣಿಗೆಗಳು ಏನಾಗಲಿವೆ ಎಂಬುದು ಸಾರ್ವಜನಿಕರಲ್ಲಿ ಕುತೂಹಲಕ್ಕೆಡೆಮಾಡಿದೆ.
ಬಿಜೆಪಿಗೆ ಆಪರೇಷನ್ ಭೀತಿ:
ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಂತಾಗಿದೆ. ಕೈ ವರಿಷ್ಠರು ಶೆಟ್ಟರ್ ಅವರಿಗೆ ಹು-ಧಾ ಮಹಾನಗರ ಪಾಲಿಕೆಯನ್ನು ಕಾಂಗ್ರೆಸ್ ವಶಕ್ಕೆ ಪರಿಸಿಕೊಳ್ಳಲು ಜವಾಬ್ದಾರಿ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಶೆಟ್ಟರ್ ಬಿಜೆಪಿಗೆ ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ ಅವರ ಬೆಂಬಲಿತ ಕೆಲ ಬಿಜೆಪಿ ಪಾಲಿಕೆ ಸದಸ್ಯರು ಅವರೊಂದಿಗೆ ಇರಲಿದ್ದಾರೆ ಎಂಬ ವದಂತಿಗಳು ಸಹ ಇದ್ದವು. ಅವೆಲ್ಲ ಬೆಳವಣಿಗೆಗಳ ನಂತರ ಈಗ ಮೇಯರ್, ಉಪ ಮೇಯರ್ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಡೆ ಶೆಟ್ಟರ್ ಅವರ ಮೂಲಕ ತನ್ನ ಕಾರ್ಯಸಾಧನೆಗೆ ಮುಂದಾಗಿದೆ ಎನ್ನಲಾಗಿದೆ.