ಹು-ಧಾ ಅವಳಿ ನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಹುಬ್ಬಳ್ಳಿ, ಜೂ 11: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ “100 ನಾಟ್ ಔಟ್” ಹೆಸರಿನಲ್ಲಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿದ್ದು, ಹುಬ್ಬಳ್ಳಿ-ಧಾರವಾಡ ಅವಳಿನಗದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ಹುಬ್ಬಳ್ಳಿಯ ಬಂಕಾಪೂರ ಚೌಕ್ ಪೆಟ್ರೋಲ್ ಬಂಕ್ ಮುಂದೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಇದೇ ಸಂದರ್ಭದಲ್ಲಿ ದ್ವಿಚಕ್ರ ವಾಹನಕ್ಕೆ ಹಗ್ಗ ಕಟ್ಟಿ ಚಕ್ಕಡಿಯಿಂದ ಎಳೆದುಕೊಂಡು ಹೋಗುವ ಮೂಲಕ ಪ್ರತಿಭಟಿಸಲಾಯಿತು. ಶಾಸಕ ಪ್ರಸಾದ ಅಬ್ಬಯ್ಯ ಸೈಕಲ್ ಮೇಲೆ ಸವಾರಿ ಮಾಡಿದರು.
ಅಲ್ಲದೆ ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಪೆಟ್ರೋಲ್ ಬಂಕ್ ಎದುರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷೆಣೆ ಕೂಗಿ ಆಕ್ರೋಶ ಹೊರಹಾಕಿದರು. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ್ದರಿಂದ ಜನತೆಯ ಮೇಲೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ. ಕೂಡಲೇ ಸರ್ಕಾರ ಬೆಲೆ ಇಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಹೇಂದ್ರ ಸಿಂಘಿ, ಸದಾನಂದ ಡಂಗನವರ, ವೀರಣ್ಣ ಮತ್ತಿಕಟ್ಟಿ, ಡಾ. ಶರಣಪ್ಪ ಕೊಟಗಿ, ವೀರಣ್ಣ ಹಿರೇಹಾಳ, ಅನ್ವರ ಮುಧೋಳ, ಪ್ರಸನ್ನಕುಮಾರ ಮಿರಜಕರ, ರಾಜಶೇಖರ ಮೆಣಸಿನಕಾಯಿ, ವಾದಿರಾಜ ಕುಲಕರ್ಣಿ, ಮೋಹನ ಅಸುಂಡಿ, ಇಲಿಯಾಸ ಮನಿಯಾರ, ಶಾರುಖ ಮುಲ್ಲಾ, ಅಲ್ತಾಫ ಹಳ್ಳೂರ, ಕುಮಾರ ಕುಂದನಹಳ್ಳಿ, ಗಂಗಾಧರ ದೊಡವಾಡ, ರಾಜೇಶ್ವರಿ ಬಿಲಾನಾ ಉಪಸ್ಥಿತರಿದ್ದರು.
ಧಾರವಾಡ:
ಇಲ್ಲಿನ ಬಾಗಲಕೋಟ ಪೆಟ್ರೋಲ್ ಬಂಕ್ ಮುಂದೆ ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅಸಮರ್ಥ ಆಡಳಿತದಿಂದ ಪೆಟ್ರೋಲ್, ಡೀಸೆಲ್ ಬೆಲೆಗಳು ರೂ.100/- ರ ಗಡಿ ತಲುಪಿದೆ. ಬೆಲೆ ಏರಿಕೆಯಿಂದಾಗಿ ಮನೆಬಳಕೆಯ ಹಾಗೂ ದೈನಂದಿನ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಕಳೆದ 13 ತಿಂಗಳುಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಲೀಟರ್‍ಗೆ ತಲಾ ರೂ. 25.72 ಮತ್ತು ರೂ.23.93 ರಷ್ಟು ಏರಿಕೆಯಾಗಿದೆ. ಕಳೆದ 5 ತಿಂಗಳಲ್ಲಿ ಹಲವು ಬಾರಿ ದರಗಳನ್ನು ಏರಿಸಲಾಗಿದೆ. ಇದರಿಂದ ಸಾರ್ವಜನಿಕರ ಲೂಟಿಯಾಗಿದೆ ಎಂದು ತೀವ್ರ್ರ ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ನಿಯಮಾವಳಿಗಳಿಂದಾಗಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಲು ಸಾಧ್ಯವಿಲ್ಲದ ಕಾರಣ ಕಾಂಗ್ರೆಸ್ ಪಕ್ಷವು ಪ್ರತಿಭಟನೆಯನ್ನು ಸಾಂಕೇತಿಕಾವಾಗಿ ಮಾಡಿದ್ದು, ಇಂದಿನ ಸಮಸ್ಯೆಯ ತೀವ್ರತೆ ಮತ್ತು ಪಕ್ಷದ ಬದ್ಧತೆಗಳನ್ನು ಜನರಿಗೆ ತಿಳಿಸಬೇಕಾಗಿರುವುದು ಕಾಂಗ್ರೆಸ್‍ನ ಆದ್ಯ ಕರ್ತವ್ಯವಾಗಿದೆ. ಅದರಂತೆ ಕೆಪಿಸಿಸಿಯು 5 ದಿನಗಳನ್ನು ನಿಗದಿ ಮಾಡಿ ಎಲ್ಲ ಪೆಟ್ರೋಲ್ ಬಂಕ್‍ಗಳ ಮುಂದೆ ಸಾಂಕೇತಿಕ ಪ್ರತಿಭಟನೆ ಮಾಡಲು ತೀರ್ಮಾನಿಸಿತ್ತು ಎಂದರು. ಪ್ರತಿಭಟನೆಯಲ್ಲಿ ಆನಂದ ಜಾಧವ, ಪ್ರಕಾಶ ಘಾಟಗೆ, ಆನಂದ ಮುಶಣ್ಣವರ, ಜೇಮ್ಸ್ ಯಮಹಾ, ಇತರರು ಭಾಗವಹಿಸಿದ್ದರು.

ವಿದ್ಯಾಗಿರಿ:
ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ನೇತೃತ್ವದಲ್ಲಿ ಧಾರವಾಡದ ವಿದ್ಯಾಗಿರಿಯ ರಿಲಾಯನ್ಸ್ ಪೆಟ್ರೋಲ್ ಬಂಕ್ ಎದುರು ಸೈಕಲ್ ಮೇಲೆ ಸಂಚರಿಸಿ ಪ್ರತಿಭಟನೆ ಮಾಡಲಾಯಿತು. ಗೌರಿ ಮಾತನಾಡಿ, ಕಾರ್ಪೊರೇಟ್ ಕಂಪನಿಗಳ ತೆರಿಗೆ ಸುಂಕ ಶೇಕಡಾ 39 ರಿಂದ 43 ಇದ್ದುದನ್ನು, 25ಕ್ಕೆ ಕಡಿಮೆ ಮಾಡಿ ಜನಸಾಮಾನ್ಯರ ತೆರಿಗೆ ಸುಂಕವನ್ನು 59 ರಿಂದ 63 ಇದ್ದದ್ದನ್ನು ಶೇಕಡಾ 75 ಕ್ಕೆ ಏರಿಸಿ ಸಾಮಾನ್ಯ ಜನರ ವಿರೋಧಿ ನೀತಿಯನ್ನು ನರೇಂದ್ರ ಮೋದಿ ಅವರ ಸರಕಾರ ಸಾಬೀತುಪಡಿಸಿದೆ ಎಂದು ಆಕ್ರೊಶವನ್ನು ಹೊರಹಾಕಿದರು. ಇದೇ ಸಂದರ್ಭದಲ್ಲಿ “100 ರೂ. ನಾಟ್ ಔಟ್” ಘೋಷಣೆ ಕೋಗಿ ವಿರೋಧಿಸಲಾಯಿತು. ಮಹಿಳಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆತ್ಮನಂದ್ ತಳವಾರ, ಮಾಜಿ ಪಾಲಿಕೆ ಸದಸ್ಯ ಮಹಾವೀರ್ ಶಿವಣ್ಣವರ, ಮಂಜುನಾಥ್ ಕಟ್ಟಿ, ಪರಶುರಾಮ್ ಮಾನೆ, ಷಣ್ಮುಖ ಬೆಟಗೇರಿ, ಜೇಮ್ಸ್ ರೋಹಿತ ಕಲಾಲ, ಪ್ರವೀಣ ವನಹಳ್ಳಿಮಠ, ಮಹಾಂತೇಶ್ ಕೋಳಿವಾಡ, ಅರ್ಜುನ್ ಕತ್ರಿಮಲ, ಸುರೇಶ ರೆಡ್ಡಿ ಇದ್ದರು.