ಹು-ಧಾ ಅವಳಿನಗರ ಸ್ತಬ್ದ

ಹುಬ್ಬಳ್ಳಿ ಏ 28 : ಕೊರೊನಾ ಎರಡನೇ ಅಲೆ ತಡೆಗಟ್ಟಲು ರಾಜ್ಯ ಸರ್ಕಾರ 14 ದಿನಗಳ ಲಾಕ್‍ಡೌನ್ ಜಾರಿ ಮಾಡಿದ್ದು, ಮೊದಲ ದಿನವಾದ ಇಂದು ಜಿಲ್ಲೆಯಾದ್ಯಂತ ಬಿಗಿ ಕ್ರಮ ಕೈಗೊಳ್ಳಲಾಗಿದ್ದು, ಧಾರವಾಡ ಜಿಲ್ಲೆ ಸಂಪೂರ್ಣ ಸ್ತಬ್ದಗೊಂಡಿತು.
ರಾಜ್ಯ ಸರ್ಕಾರ ಕೆಲ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲ ವ್ಯಾಪಾರ ವಹಿವಾಟು, ಸಾರಿಗೆ ಇನ್ನಿತರ ಚಟುವಟಿಕೆಗಳಿಗೆ ನಿರ್ಬಂಧ ಹೇರಿದ್ದು, ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದ್ದು, ಇದೇ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ವಿವಿಧೆಡೆ ಸಾರ್ವಜನಿಕರು ಸಾಮಾಜಿಕ ಅಂತರವಿಲ್ಲದೇ ಅಗತ್ಯ ವಸ್ತುಗಳ ಖರೀದಿ ಭರಾಟೆಯಲ್ಲಿ ತೊಡಗಿದ್ದುದು ಕಂಡುಬಂತು.
ಬೆಳಿಗ್ಗೆ 10 ಗಂಟೆಯಾಗುತ್ತಿದ್ದಂತೆ ರಸ್ತೆಗಳಿದ ಪೆÇಲೀಸರು ಅಂಗಡಿ-ಮುಂಗಟ್ಟು, ಬಂದ್ ಮಾಡಿಸುವ ಕಾರ್ಯಾಚರಣೆಗೆ ಮುಂದಾದರು. ಮಾರುಕಟ್ಟೆ ಪ್ರದೇಶಗಳಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಪೊಲೀಸರು ಎಚ್ಚರಿಕೆ ನೀಡಿ ತೆರಳುವಂತೆ ಸೂಚಿಸಿ ಕಳುಹಿಸಿದರು. ಪೊಲೀಸ್ ಚಾಲುಕ್ಯ ವಾಹನಗಳು ನಗರಾದ್ಯಂತ ಜನರಿಗೆ ಬೆಳಿಗ್ಗೆ 10 ಗಂಟೆಯ ನಂತರ ಓಡಾಡದಂತೆ ಧ್ವನಿವರ್ಧಕಗಳಲ್ಲಿ ಹೇಳಿ ಕಳುಹಿಸುತ್ತಿರುವ ದೃಶ್ಯಗಳು ಕಂಡುಬಂದವು.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಾದ್ಯಂತ ಬಿಗಿ ಪೆÇಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಹುಬ್ಬಳ್ಳಿಯ ಚೆನ್ನಮ್ಮ ವೃತ್ತ, ಕೋರ್ಟ್ ವೃತ್ತ, ಕೇಶ್ವಾಪೂರ ವೃತ್ತ, ಹಳೇಹುಬ್ಬಳ್ಳಿ ರಸ್ತೆ, ಸ್ಟೇಶನ್ ರಸ್ತೆ, ಗೋಕುಲ್ ರಸ್ತೆ, ಧಾರವಾಡದ ಜುಬ್ಲಿ ವೃತ್ತ, ಸವದತ್ತಿ ರಸ್ತೆ, ಬೆಳಗಾವಿ, ಕೆಯುಡಿ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಪೆÇಲೀಸರು ಸರ್ಪಗಾವಲಿನಲ್ಲಿ ನಿಂತಿದ್ದು ಕಂಡು ಬಂತು. ಅಗತ್ಯ ಕೆಲಸಕ್ಕೆ ತೆರಳುವವರನ್ನು ವಿಚಾರಿಸಿ ಕಳುಹಿಸುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದಿತು.
ಗ್ರಾಮ ಪ್ರದೇಶಗಳಲ್ಲಿ ಜನರು ಗುಂಪು ಗುಂಪಾಗಿ ನಿಲ್ಲುವುದು, ಅನವಶ್ಯಕವಾಗಿ ಹೊರಗೆ ಬರುವುದು, ಮಾರುಕಟ್ಟೆ ಪ್ರದೇಶಗಳಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲದೆ ಓಡಾಡುವ ದೃಶ್ಯಗಳು ಹೆಚ್ಚಾಗಿ ಕಂಡು ಬಂದವು. ಇತ್ತೀಚಿನ ದಿನಗಳಲ್ಲಿ ಕೊರೊನಾ ಸಾವು ನೋವಿನ ಪ್ರಕರಣಗಳು ಹೆಚ್ಚಾಗಿದ್ದು, ಜನತೆ ಇದನ್ನು ಅರ್ಥ ಮಾಡಿಕೊಂಡು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸ್ವನಿಯಂತ್ರಿತರಾಗಬೇಕಿದೆ.
ಬೆಳಿಗ್ಗೆ 10 ಗಂಟೆಯ ನಂತರ ಸಾರ್ವಜನಿಕರು ಹಾಗೂ ವಾಹನ ಸಂಚಾರವಿಲ್ಲದೇ ಹು-ಧಾ ಅವಳಿ ನಗರ ಬಿಕೋ ಎನ್ನುತ್ತಿತ್ತು. ಕಳೆದ ವರ್ಷದ ಲಾಕ್‍ಡೌನ್ ದಿನಗಳನ್ನು ಮತ್ತೇ ಸಾರ್ವಜನಿಕರು ಸದ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಯಿಂದ ಅನುಭವಿಸುವಂತಾಗಿದೆ. ಕೊರೊನಾ ಸೋಂಕನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಮತ್ತೆ ಲಾಕ್‍ಡೌನ್ ಮೊರೆ ಹೋಗಿದ್ದು, ಸಾರ್ವಜನಿಕರು ಸಹ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ಕೊರೊನಾ ಮಹಾಮಾರಿಯನ್ನು ಹತ್ತಿಕ್ಕಲು ಅಷ್ಟೇ ಕೈಜೋಡಿಸಬೇಕಿದೆ.