ಹು-ಧಾದಲ್ಲಿ ಶ್ರೀರಾಮ ಸಂಭ್ರಮ


ಹುಬ್ಬಳ್ಳಿ, ಜ 22: ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರಡೆಲ್ಲೆಡೆ ಸಂಭ್ರಮ ಮನೆಮಾಡಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಅವಳಿ ನಗರಗಳಲ್ಲಿ ಆಂಜನೇಯ ದೇವಸ್ಥಾನಗಳಲ್ಲಿ, ವಿವಿಧ ದೇವಸ್ಥಾನಗಳಲ್ಲಿ, ವೃತ್ತಗಳಲ್ಲಿ, ಮಾರ್ಗಗಳಲ್ಲಿ, ವಿವಿಧ ಬಡಾವಣೆಗಳಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಲಾಯಿತು.
ರಸ್ತೆಗಳು, ವಾಹನಗಳು, ಮನೆಗಳ ಮೇಲೆ ಶ್ರೀರಾಮನ ಹಾಗೂ ಶ್ರೀ ಆಂಜನೇಯನ ಕೇಸರಿ ಧ್ವಜಗಳು ರಾರಾಜಿಸಿದವು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರಸಾದ ವಿತರಿಸಲಾಯಿತು. ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು.
ಮನೆಗಳಲ್ಲಿಯೂ ಆರಾಧನೆಗಳು ನಡೆದವು. ಮನೆಗಳ ಮುಂದೆ ರಂಗೋಲಿಯಲ್ಲಿ ಶ್ರೀರಾಮನ ಚಿತ್ರಗಳನ್ನು ಬಿಡಿಸಿರುವುದು ಕಂಡುಬಂತು.
ವಿವಿಧೆಡೆ ಭಜನೆ, ಭಕ್ತಿಗೀತೆ, ಸಂಗೀತ, ಜಾಂಜ್ ಮೇಳ, ಮೆರವಣಿಗೆಗಳು, ನೃತ್ಯ ಪ್ರದರ್ಶನ, ನಾಟಕ ಪ್ರದರ್ಶನ ನಡೆದವು. ವೇದಿಕೆ ಕಾರ್ಯಕ್ರಮಗಳು ಸಹ ನಡೆದವು. ಬೈಕ್ ರ್ಯಾಲಿಗಳನ್ನು ನಡೆಸಲಾಯಿತು.
ಅನೇಕ ಕಡೆಗಳಲ್ಲಿ ಎಲ್‍ಇಡಿ ಪರದೆಗಳನ್ನು ಅಳವಡಿಸಿ ಅಯೋಧ್ಯೆಯಲ್ಲಿನ ಸಂಭ್ರಮವನ್ನು ವೀಕ್ಷಿಸಲಾಯಿತು.
ದುರ್ಗದಬೈಲ್, ಶ್ರೀ ತುಳಜಾ ಭವಾನಿ ವೃತ್ತ, ಸ್ಟೇಷನ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಗೋಕುಲ್ ರಸ್ತೆ, ಕೇಶ್ವಾಪುರ ಸೇರಿದಂತೆ ವಿವಿಧೆಡೆ ಕೇಸರಿ ಧ್ವಜಗಳು ರಾರಾಜಿಸಿದವು. ಹುಬ್ಬಳ್ಳಿಯ ಗವಳಿ ಗಲ್ಲಿಯ ರಾಮ ಭಕ್ತರು 12 ಅಡಿ ಉದ್ದದ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ವಿಶೇಷವಾಗಿತ್ತು.
ಜನತೆ ಶ್ರೀರಾಮ ಸಂಭ್ರಮದಲ್ಲಿ ಮಿಂದೆದ್ದರು.