ಹುಳು-ಹುಪ್ಪಟೆಗಳ ಕಾಟಕ್ಕೆ ನಾಗರೀಕರ ತತ್ತರ!’


ಶಿವಮೊಗ್ಗ, ಎ. 9: ‘ಸಂಜೆಯಾಗುತ್ತಲೇ ಮನೆಗಳಿಗೆ ಹಾರಿಬರುವ ಹುಳು- ಹುಪ್ಪಟೆಗಳು…
ಸೊಳ್ಳೆ ಪರದೆ ಕಟ್ಟಿಕೊಂಡು ಊಟ ಮಾಡುವ ದುಃಸ್ಥಿತಿ… ನಿದ್ರೆಬಿಟ್ಟ ನಾಗರೀಕರು…
ಹುಳುಗಳ ಕಾಟದಿಂದ ಮುಕ್ತಿ ಕೊಡಲು ಗೋಗರೆಯುತ್ತಿರುವ ನಿವಾಸಿಗಳು..!’
ಇದು, ಶಿವಮೊಗ್ಗ ಮಹಾನಗರ ಪಾಲಿಕೆ 5 ನೇ ವಾರ್ಡ್ ಆಲ್ಕೋಳ ಬಡಾವಣೆಯ, ಭಾರತೀಯ ಆಹಾರ
ನಿಗಮ (ಎಫ್.ಸಿ.ಐ.) ಗೋದಾಮು ಸುತ್ತಮುತ್ತಲಿನ ಮನೆಗಳ ನಿವಾಸಿಗಳು ಎದುರಿಸುತ್ತಿರುವ
ಸಮಸ್ಯೆಗಳ ಪ್ರಮುಖಾಂಶಗಳು.
ಹೌದು. ಎಫ್.ಸಿ.ಐ. ಗೋದಾಮಿನಿಂದ ಮನೆಗಳಿಗೆ ಆಗಮಿಸುವ ಭಾರೀ ಪ್ರಮಾಣದ ನುಸಿ, ಹುಳು-ಹುಪ್ಪಟೆಗಳಿಂದ, ನಿವಾಸಿಗಳು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಮನೆಯ ಎಲ್ಲೆಂದರಲ್ಲಿ ಓಡಾಡುವ ಹುಪ್ಪಟ್ಟೆಗಳಿಂದ ರೋಸಿ ಹೋಗಿದ್ದಾರೆ. ನಾನಾ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಲರ್ಜಿಯಂತಹ ಅನಾರೋಗ್ಯ ಸಮಸ್ಯೆಗೂ ತುತ್ತಾಗುತ್ತಿದ್ದಾರೆ.
‘ಕಳೆದ ಹಲವು ದಿನಗಳಿಂದ ಈ ಸಮಸ್ಯೆಯಿದೆ. ಸಂಜೆಯಾಗುತ್ತಲೆ ಎಫ್.ಸಿ.ಐ. ಗೋದಾಮಿನಿಂದ ಹುಳು-ಹುಪ್ಪಟೆಗಳು ಮನೆಗಳಿಗೆ ಆಗಮಿಸುತ್ತವೆ. ಮನೆಯ ಎಲ್ಲ ಕೋಣೆಗಳಲ್ಲಿಯೂ ಆವರಿಸಿಕೊಳ್ಳುತ್ತವೆ. ಸೊಳ್ಳೆ ಪರದೆ ಕಟ್ಟಿಕೊಂಡು ಊಟ ಮಾಡುವಂತಾಗಿದೆ. ರಾತ್ರಿ ವೇಳೆ ನಿದ್ರಿಸಲು ಆಗುತ್ತಿಲ್ಲ. ಏನು ಮಾಡಬೇಕು ಎಂಬುವುದೆ ಗೊತ್ತಾಗುತ್ತಿಲ್ಲ’ ಎಂದು ಆಲ್ಕೋಳದ ನಿವಾಸಿ ಅನಿಲ್ ಎಂಬುವರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
‘ನುಸಿ, ಹುಳು-ಹುಪ್ಪಟೆಗಳು ಸಣ್ಣ ಮಕ್ಕಳ ಕಿವಿಗಳಲ್ಲಿಯೂ ಸೇರಿಕೊಳ್ಳುತ್ತಿವೆ. ಇದು ಆತಂಕ ಉಂಟು ಮಾಡಿದೆ. ಇಷ್ಟೆಲ್ಲ ಸಮಸ್ಯೆಯಿದ್ದರೂ ಗೋದಾಮಿನವರು ಹುಳುಗಳ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಜಿಲ್ಲಾಡಳಿತವು ತಕ್ಷಣವೇ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ನಿವಾಸಿಗಳು ನೆಮ್ಮದಿಯಾಗಿ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು’ ಎಂದು ಸ್ಥಳೀಯರು ಆಗ್ರಹಿಸುತ್ತಾರೆ.
ಕ್ರಮಕೈಗೊಳ್ಳಲಿ: ಗೋದಾಮಿನಲ್ಲಿ ಹುಳು-ಹುಪ್ಪಟೆಗಳ ಸೃಷ್ಟಿಯಾಗಲು ಕಾರಣವೇನು?
ಸಂಗ್ರಹಿಸಲಾದ ಆಹಾರ ಧಾನ್ಯಗಳು ಹಾಳಾಗಿದ್ದರಿಂದ ಹುಳುಗಳ ಹಾವಳಿ ಹೆಚ್ಚಾಗಿದೆಯೇ?
ಪ್ರಸ್ತುತ ಗೋದಾಮು ಸುತ್ತಮುತ್ತಲಿನ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗೆ ಎಫ್.ಸಿ.ಐ. ಆಡಳಿತ ಕೈಗೊಂಡಿರುವ ಕ್ರಮಗಳೇನು? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
‘ಪ್ರತಿಭಟನೆ ಎಚ್ಚರಿಕೆ’: ‘ಎಫ್.ಸಿ.ಐ. ಗೋದಾಮಿನಿಂದ ಬರುತ್ತಿರುವ ನುಸಿ ಮತ್ತೀತರ ಹುಳುಗಳಿಂದ ವಾರ್ಡ್ ನ ಆಲ್ಕೋಳ ಬಡಾವಣೆ ನಿವಾಸಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ತಾವು ಕೂಡ ಬಡಾವಣೆಗೆ ಭೇಟಿಯಿತ್ತು ಪರಿಶೀಲಿಸಿದ್ದೆನೆ.
ಆರೋಗ್ಯಾಧಿಕಾರಿಯೂ ಭೇಟಿಯಿತ್ತು ಎಫ್.ಸಿ.ಐ. ಅಧಿಕಾರಿಗಳ ಜೊತೆ ಸಮಾಲೋಚಿಸಿದ್ದಾರೆ.
ಎಫ್.ಸಿ.ಐ. ಕಡೆಯವರು ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ವಾರ್ಡ್ 5 ರ ಕಾರ್ಪೋರೇಟರ್ ಲತಾ ಗಣೇಶ್ ರವರು ಎಚ್ಚರಿಕೆ ನೀಡಿದ್ದಾರೆ.
‘ಎಫ್.ಸಿ.ಐ. ಗೋದಾಮಿನಿಂದ ಭಾರೀ ಪ್ರಮಾಣದ ಹುಳು-ಹುಪ್ಪಟೆ ಸಮೀಪದ ವಸತಿ ಪ್ರದೇಶಗಳಿಗೆ ಆಗಮಿಸುತ್ತಿವೆ. ಈಗಾಗಲೇ ತಾವು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿ, ಎಫ್.ಸಿ.ಐ. ಗೋದಾಮಿನ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದೆನೆ. ತಕ್ಷಣವೇ ಹುಳುಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೆನೆ. ರಾಸಾಯನಿಕ ಸಿಂಪಡಣೆ ಮೂಲಕ
ನಿಯಂತ್ರಣಕ್ಕೆ ಕ್ರಮಕೈಗೊಳ್ಳುವುದಾಗಿ ಎಫ್.ಸಿ.ಐ. ಅಧಿಕಾರಿಗಳು ಹೇಳಿದ್ದಾರೆ’ ಎಂದು ಪಾಲಿಕೆ ಆರೋಗ್ಯಾಧಿಕಾರಿ ಕೃಷ್ಣಮೂರ್ತಿಯವರುತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ
ಹೇಳಿದ್ದಾರೆ.