ಹುಳಿಯಾರಿಗೆ ಜಯಚಂದ್ರ ಕೊಡುಗೆ ಶೂನ್ಯ: ಜೆಸಿಎಂ

ಹುಳಿಯಾರು, ಮಾ. ೨೭- ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುವ ಟಿ.ಬಿ.ಜಯಚಂದ್ರ ಅವರಿಂದ ಹುಳಿಯಾರಿಗೆ ಯಾವುದೇ ಕೊಡುಗೆ ಇಲ್ಲ. ಹುಳಿಯಾರು ಅಭಿವೃದ್ಧಿಯಾಗಬೇಕೆಂದಿದ್ದರೆ ಬಿಜೆಪಿ ಗೆಲ್ಲಿಸಿ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಅವರು ಮಾತನಾಡಿದರು.
ಜಯಚಂದ್ರ ಅವರು ೨ ಬಾರಿ ಸಚಿವರಾಗಿದ್ದರೂ ಹುಳಿಯಾರು ಆಸ್ಪತ್ರೆ ಮೇಲ್ದರ್ಜೆಗೇರಲಿಲ್ಲ. ಪಟ್ಟಣದ ರಸ್ತೆಗಳು ಅಭಿವೃದ್ಧಿ ಕಾಣಲಿಲ್ಲ, ತಾಲ್ಲೂಕಿಗೆ ನದಿ ನೀರು ಹರಿಯಲಿಲ್ಲ ಎಂದು ಟೀಕಿಸಿದ ಸಚಿವರು, ಕಳೆದ ಚುನಾವಣೆಯಲ್ಲಿ ಭರವಸೆ ನೀಡಿದಂತೆ ತಾಲ್ಲೂಕಿಗೆ ಹೇಮೆ ಹರಿಸಿದ್ದೇನೆ. ಹುಳಿಯಾರು ಪಟ್ಟಣದ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದೇನೆ. ಶೀಘ್ರದಲ್ಲೇ ಹುಳಿಯಾರು ಆಸ್ಪತ್ರೆ ಮೇಲ್ದರ್ಜೆಗೇರಿಸಿ ಐದಾರು ಮಂದಿ ವೈದ್ಯರು ನಿತ್ಯ ಇರುವಂತೆ ಮಾಡುತ್ತೇನೆ. ಅಲ್ಲದೆ ತಾಲ್ಲೂಕಿನ ಶೇ.೯೦ ರಷ್ಟು ಕೆರೆಗಳಿಗೆ ನದಿ ನೀರು ಹರಿಸುವ ಯೋಜನೆ ಮಂಜೂರು ಮಾಡಿಸಿದ್ದೇನೆ ಎಂದರು.
ಈಗ ಚುನಾವಣೆ ಅಭಿವೃದ್ಧಿ ವರ್ಸಸ್ ದುಡ್ಡು ಎನ್ನುವಂತ್ತಾಗಿದೆ. ನಾನು ಮಾಡಿರುವ ಅಭಿವೃದ್ಧಿಗೆ ಮನ್ನಣೆ ನೀಡಿ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಿಸಿದರೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ರಾಜಕಾರಣ ಉಳಿಯುತ್ತದೆ. ಇಲ್ಲವಾದಲ್ಲಿ ಚುನಾವಣೆಗೆ ಬಂದು ಹಣ ಚೆಲ್ಲುವ ವ್ಯಾಪಾರ ರಾಜಕಾರಣ ಉಳಿಯುತ್ತದೆ ಎಂದರಲ್ಲದೆ ಇನ್ನೂ ಎರಡೂವರೆ ವರ್ಷ ನಾನು ಅಧಿಕಾರದಲ್ಲಿರುತ್ತೇನೆ. ನನ್ನ ಅಧಿಕಾರವಧಿಯಲ್ಲಿ ಅಭಿವೃದ್ಧಿ ಕೆಲಸಗಳು ಪಟ್ಟಣದಲ್ಲಿ ನಡೆಯಬೇಕೆಂದಿದ್ದರೆ ನನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿ ಶಕ್ತಿ ನೀಡಿ ಎಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ತಾ.ಪಂ. ಮಾದಿ ಅಧ್ಯಕ್ಷರುಗಳಾದ ಕೆಂಕೆರೆ ನವೀನ್, ಸೀತರಾಮಯ್ಯ, ತಾ.ಪಂ. ಮಾಜಿ ಸದಸ್ಯ ವಸಂತಯ್ಯ, ಬೀಬೀ ಫಾತೀಮಾ, ಬಡ್ಡಿಪುಟ್ಟರಾಜು, ತೆಂಗಿನ ನಾರಿನ ಮಂಡಳಿ ನಿರ್ದೇಶಕ ಎಂ.ಅಶೋಕ್‌ಬಾಬು ಮತ್ತಿತರರು ಉಪಸ್ಥಿತರಿದ್ದರು.