ಮೈಸೂರು,ಅ.೩- ರಾಜ್ಯದಲ್ಲಿ ಕಾಡುಪ್ರಾಣಿಗಳು,ಮಾನವನ ಸಂಘರ್ಷಕ್ಕೆ ಮತ್ತೊಂದು ಬಲಿಯಾಗಿದೆ.ಆನೆ, ಚಿರತೆಗಳ ದಾಂಗುಡಿಯಿಂದ ಬದುಕುವುದೇ ಕಷ್ಟ ಎನಿಸುವ ಹೊತ್ತಿನಲ್ಲಿ ಹುಲಿಯೊಂದು ರೈತನನ್ನು ಕೊಂದು ಹಾಕಿದ ದಾರುಣ ಘಟನೆ ಹುಣಸೂರು ತಾಲೂಕಿನ ಉಡುವೆಪುರದಲ್ಲಿ ನಡೆದಿದೆ.
ಮೃತಪಟ್ಟ ರೈತನನ್ನು ಉಡುವೆಪುರದ ಗಣೇಶ್ (೫೮) ಎಂದು ಗುರುತಿಸಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮುದ್ದನಹಳ್ಳಿ ಅರಣ್ಯ ಪ್ರದೇಶ ಸಮೀಪದ ಗ್ರಾಮದ ನಿವಾಸಿಯಾಗಿರುವ ಗಣೇಶ ಅವರು ನಿನ್ನೆ ಜಾನುವಾರುಗಳನ್ನು ಮೇಯಿಸಲು ಹೋಗಿದ್ದರು. ಆದರೆ, ಸಂಜೆ ಜಾನುವಾರುಗಳು ಮಾತ್ರ ಮನೆಗೆ ವಾಪಸ್ ಆಗಿವೆ. ಗಣೇಶ್ ಮರಳಿ ಬಂದಿರಲಿಲ್ಲ.
ಗಾಬರಿಗೊಂಡ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಹುಡುಕಾಟದ ವೇಳೆ ಮುದ್ದನಹಳ್ಳಿ ಅರಣ್ಯದ ಬಫರ್ ವಲಯದಲ್ಲಿ ಕೆರೆ ಬಳಿ ಗಣೇಶ್ ಶವ ಪತ್ತೆಯಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದರು.
ಪರಿಶೀಲಿಸಿದಾಗ ಅವರು ಹುಲಿ ದಾಳಿಯಿಂದ ಪ್ರಾಣ ಕಳೆದುಕೊಂಡಿರುವುದು ದೃಢವಾಯಿತು. ಪತ್ನಿ ಮತ್ತು ಮೂವರು ಮಕ್ಕಳನ್ನು ಹೊಂದಿರುವ ಗಣೇಶ್ ಅವರ ಸಾವಿಗೆ ಊರಿನ ಜನ ಆಕ್ರೋಶ ವ್ಯಕ್ತಪಡಿಸಿದರು.
ಕಾಡು ಪ್ರಾಣಿಗಳ ಹಾವಳಿ ವಿಚಾರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಉಂಟಾಯಿತು. ಸ್ಥಳಕ್ಕೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಭೇಟಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಜಿ.ಡಿ. ಹರೀಶ್ ಗೌಡ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಾಸಕರು ೫೦ ಸಾವಿರ ರೂ. ಪರಿಹಾರ ನೀಡಿದರು. ಕಾಡು ಪ್ರಾಣಿಗಳ ಹಾವಳಿ ಇರುವ ಪ್ರದೇಶಕ್ಕೆ ಜಾನುವಾರುಗಳನ್ನು ಬಿಡಬೇಡಿ ಎನ್ನುವ ಸಲಹೆಯನ್ನು ಅಧಿಕಾರಿಗಳು ನೀಡಿದ್ದರು. ಆದರೆ, ಇದು ಜನರನ್ನು ಕೆರಳಿಸಿತ್ತು. ಅಲ್ಲಿಗೆ ಬಿಡದೆ ಮತ್ತೆಲ್ಲಿ ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಡಾನೆಗಳ ದಾಳಿ:
ಮೈಸೂರಿನ ಕಥೆ ಹೀಗಾದರೆ ಕೊಡಗಿನಲ್ಲಿ ಕಾಡಾನೆಗಳ ದಾಂಗುಡಿ ಜನರನ್ನು ಆತಂಕಕ್ಕೆ ತಳ್ಳಿದೆ. ದಾಳಿಯ ಘಟನೆಗಳು ನಿತ್ಯ ಎಂಬಂತೆ ನಡೆಯುತ್ತಿವೆ. ಕಳೆದ ಒಂದೆರಡು ತಿಂಗಳ ಅವಧಿಯಲ್ಲೇ ಹಲವಾರು ಮಂದಿ ಆನೆ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ.
ಕೊಡಗಿನ ಆನೆಕಾಡು ಅರಣ್ಯ ಪ್ರದೇಶದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ದಳದಲ್ಲಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಿರೀಶ್ (೩೫) ಅವರನ್ನೇ ಆನೆ ಇತ್ತೀಚೆಗೆ ಬಲಿ ಪಡೆದಿದೆ. ಆನೆ ಗಿರೀಶ್ ಅವರನ್ನು ಅಟ್ಟಾಡಿಸಿಕೊಂಡು ಹೋಗಿ ದಾಳಿ ಮಾಡಿದೆ. ಅದಕ್ಕೂ ಮುನ್ನ ಆನೆ ಅದೇ ಭಾಗದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನವೊಂದರ ಮೇಲೆ ದಾಳಿ ಮಾಡಿತ್ತು.