ಹುಲಿಗಳ ಸಂರಕ್ಷಣೆಗೆ ಪೂರಕ ವಾತಾವರಣ ಅಗತ್ಯ

ಕಲಬುರಗಿ,ಜು.29: ರಾಷ್ಟ್ರೀಯ ಪ್ರಾಣಿಯಾದ ಹುಲಿಗಳ ಸಂಖ್ಯೆ ದೇಶದಲ್ಲಿ 2960, ರಾಜ್ಯದಲ್ಲಿ 524 ಇದ್ದು ಇದರ ಸಂಖ್ಯೆ ಹೆಚ್ಚಾಗಬೇಕಾಗಿದೆ. ಅರಣ್ಯ ಇಲಾಖೆ ಅವುಗಳ ಸಂರಕ್ಷಣೆಗೆ ಹುಲಿಗಳ ಸಂರಕ್ಷಣಾ ಪ್ರದೇಶ, ಸಂರಕ್ಷಣಾ ಕೋಶ, ರಾಷ್ಟ್ರೀಯ ಉದ್ಯಾನಗಳ ಸ್ಥಾಪನೆ, ಹುಲಿ ಸಮೀಕ್ಷಾ ಕಾರ್ಯ, ಕಳ್ಳ ಬೇಟೆ ತಡೆಯುವ ವಿಶೇಷ ತಂಡಗಳ ರಚನೆ ಸೇರಿದಂತೆ ಮುಂತಾದ ಕ್ರಮಗಳನ್ನು ಕೈಗೊಂಡಿದೆ. ಹುಲಿಗಳು ಉಳಿದು, ಬೆಳೆಯಲು ಪೂರಕವಾದ ವಾತಾವರಣ ಅಗತ್ಯವಾಗಿದ್ದು, ಅದಕ್ಕೆ ಅರನ್ಯ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲಕುಮಾರ ಚವ್ಹಾಣ ಸಲಹೆ ನೀಡಿದರು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿನ ಕಿರು ಮೃಗಾಲಯದಲ್ಲಿ ಅರಣ್ಯ ಇಲಾಖೆ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಜಿಲ್ಲಾ ಕಿರು ಮೃಗಾಲಯ ಮತ್ತು ಮಕ್ಕಳ ಉದ್ಯಾನವನ, ‘ಬಸವೇಶ್ವರ ಸಮಾಜ ಸೇವಾ ಬಳಗ’ ಇವುಗಳು ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಕಿರು ಮೃಗಾಲಯದಲ್ಲಿ ಏರ್ಪಡಿಸಿದ್ದ ‘ಅಂತಾರಾಷ್ಟ್ರೀಯ ಹುಲಿಗಳ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪಶ್ಚಿಮ ಘಟ್ಟಗಳು, ಕರಾವಳಿ ಪ್ರದೇಶ ಸೇರಿದಂತೆ ಕೆಲವು ಪ್ರದೇಶಗಳು ಹುಲಿಗಳ ವಾಸಕ್ಕೆ ಯೋಗ್ಯವಾಗಿದೆ. ಚಿತ್ತಾಪೂರ ತಾಲೂಕಿನ ಮಾಡಬೂಳದಲ್ಲಿ ಸುಮಾರು 43 ಎಕರೆ ಪ್ರದೇಶದಲ್ಲಿ ಹೈಟೆಕ್ ಮೃಗಾಲಯದ ಸ್ಥಾಪನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಇದು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ಏಕೈಕ ಮೃಗಾಲಯವಾಗಿದ್ದು, ಸುಮಾರು ಮೂರು ವರ್ಷಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದ್ದು, ಮೃಗಾಲಯ ಪ್ರಾರಂಭವಾಗುತ್ತದೆ. ಹುಲಿಗಳ ಸಂತತಿ ನಾಶವಾದರೆ ಮುಂದಿನ ಜನಾಂಗಕ್ಕೆ ಕೇವಲ ಚಿತ್ರದಲ್ಲಿ ತೋರಿಸಲು ಮಾತ್ರ ಸಾಧ್ಯವಿದ್ದು, ಅವುಗಳನ್ನು ಉಳಿಸಬೇಕಾಗಿದೆ. ಅಲ್ಲದೆ ಹುಲಿಯು ದೇವತೆಗಳ ವಾಹನವಾಗಿದ್ದು ಧಾರ್ಮಿಕ ಮಹತ್ವ ಕೂಡಾ ಪಡೆದಿದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ್ ಮಾರ್ಗದರ್ಶನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಚಿಂಚೋಳಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ, ಆರ್.ಎಫ್.ಓ ಭೀಮರಾಯ ಶಿಳ್ಳೆಕ್ಯಾತ್, ವಲಯ ಅರಣ್ಯ ಅಧಿಕಾರಿ ಮಲ್ಲಿಕಾರ್ಜುನ ಎಚ್.ಜಮಾದಾರ, ಸಹಾಯಕ ಅಭಿಯಂತರ ವಿಜಯಕುಮಾರ ಪಾಟೀಲ, ಅರಣ್ಯ ರಕ್ಷಕ ಕಾಂತಪ್ಪ ಪೂಜಾರಿ, ಪ್ರಾಣಿ ಪಾಲಕ ಸದಾನಂದ ಶಿರವಾಳ, ಅರಣ್ಯ ವೀಕ್ಷಕಿ ಶಿವಲೀಲಾ ತೆಗನೂರ, ಪ್ರಮುಖರಾದ ಡಾ.ಸುನೀಲಕುಮಾರ ಎಚ್.ವಂಟಿ, ಎಂ.ಬಿ.ನಿಂಗಪ್ಪ, ನರಸಪ್ಪ ಬಿರಾದಾರ ದೇಗಾಂವ, ಪರಮೇಶ್ವರ ದೇಸಾಯಿ, ದೇವೇಂದ್ರಪ್ಪ ಗಣಮುಖಿ, ಸಿದ್ದರಾಮ ತಳವಾರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.