ಹುಲಿಕೆರೆಯಲ್ಲಿ ರೈತ ದಿನಾಚರಣೆ ಕಿಸಾನ್ ವಿಚಾರಗೋಷ್ಠಿ, ಸಾಧಕ ಕೃಷಿಕರಿಗೆ ಸನ್ಮಾನ

ಕೂಡ್ಲಿಗಿ.ಡಿ.24:- ಹಳ್ಳಿಯ ಜನರು ಗ್ರಾಮಗಳಲ್ಲೇ ಉಳಿಯಬೇಕಾದರೆ ಕಾಡು ಅಥವಾ ಮರ ಕೃಷಿಯತ್ತ ಒಲವು ತೋರಬೇಕು. ಈ ಪದ್ಧತಿಯಿಂದ ಕೃಷಿ ವೆಚ್ಚವೂ ತಗ್ಗುವುದರಿಂದ ಹೆಚ್ಚಿನ ಆದಾಯ ಸಿಗಲಿದೆ ಎಂದು ಸಾವಯವ ಕೃಷಿಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೈತ ಎಚ್.ವಿಶ್ವೇಶ್ವರ ಸಜ್ಜನ್ ತಿಳಿಸಿದರು.
ತಾಲೂಕಿನ ಹುಲಿಕೆರೆ ಗ್ರಾಮದ ಎಚ್.ವಿ.ಸಜ್ಜನ್ ಅವರ ತೋಟದಲ್ಲಿ ತಾಲೂಕು ಕೃಷಿ ಇಲಾಖೆ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಕಿಸಾನ್ ವಿಚಾರ ಗೋಷ್ಠಿ ಮತ್ತು ಸಾಧಕ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಇತ್ತೀಚೆಗೆ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ವೈದ್ಯ, ಇಂಜಿನಿಯರಿಂಗ್ ಪದವೀಧರರು ಆ ವೃತ್ತಿಯಲ್ಲಿ ತೊಡಗುವುದು ಸಂತಸ. ಆದರೆ, ಕೃಷಿ ಪದವಿ ಪಡೆದವರೂ ಕೃಷಿಯತ್ತ ಸುಳಿಯದಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಸಾವಯವ, ನೈಸರ್ಗಿಕ ಕೃಷಿ ರೈತರಿಗೆ ಪ್ರಯೋಜನವಾಗುತ್ತಿದ್ದು, ರೈತರು ಮನಸ್ಸು ಮಾಡಿ ಕಾಡು ಕೃಷಿಯತ್ತ ಹೆಜ್ಜೆ ಹಾಕಿದರೆ ಆರ್ಥಿಕವಾಗಿ ಸದೃಢರಾಗಬಹುದು. ಅಲ್ಲದೆ, ವಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡಾಗ ಅನ್ನದಾತ ಸುಧಾರಣೆ ಕಾಣಬಹುದು ಎಂದು ತಿಳಿಸಿದರು.
ರೈತ ಮುಖಂಡ ಕಕ್ಕುಪ್ಪಿ ಬಸವರಾಜ ಮಾತನಾಡಿ, ಎಲ್ಲ ಕ್ಷೇತ್ರಗಳ ಕಾನೂನು ಪಾಲನೆಯಾಗುತ್ತಿದ್ದರೂ, ಕೃಷಿ ಕ್ಷೇತ್ರಕ್ಕೆ ಕಾನೂನು ಏಕೆ ಅನ್ವಯಿಸುವುದಿಲ್ಲ. ರೈತ ಬೆಳೆದ ಬೆಳೆಯನ್ನು ಕಡಿಮೆ ಬೆಲೆಗೆ ಖರೀದಿಸಿದರೆ ದಂಡ ಹಾಕುವಂಥ ಕಾನೂನು ಜಾರಿಯಾದರೆ ಮಾತ್ರ ಅನ್ನದಾತ ಸುಖವಾಗಿರಲು ಸಾಧ್ಯ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಾಮದೇವ ಕೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಅನೇಕ ಸೌಲಭ್ಯಗಳು ದೊರೆಯಲಿವೆ. ಅಲ್ಲದೆ, ಸಾಧನೆ ಮಾಡಿದ ಕೃಷಿಕರನ್ನು ಗುರುತಿಸಿ ರೈತ ದಿನಾಚರಣೆಯಂದು ಅನ್ನದಾತರನ್ನು ಸನ್ಮಾನಿಸಿ ಗೌರವಿಸುವುದರ ಜೊತೆಗೆ ತಲಾ 10 ಸಾವಿರ ರೂ. ಪ್ರೋತ್ಸಾಹಧನ ನೀಡಲಿದೆ. ಮುಂದಿನ ದಿನಗಳಲ್ಲಿ ಸಾಧಕ ರೈತರನ್ನು ಗುರುತಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಣವಿಕಲ್ಲು ಎರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹೂವಿನಹಡಗಲಿ ಕೃಷಿ ಕೇಂದ್ರದ ಮಂಜುನಾಥ ಭಾನುವಳ್ಳಿ, ರೈತ ಸಂಘದ ಮುಖಂಡ ದೇವರಮನೆ ಮಹೇಶ್, ಸಾವಯವ ಕೃಷಿಕ ಪೂಜಾರಹಳ್ಳಿ ತಿಪ್ಪೇಸ್ವಾಮಿ ಮಾತನಾಡಿದರು.
ಸಾಧಕ ಕೃಷಿಕರಿಗೆ ಸನ್ಮಾನ : ಕೂಡ್ಲಿಗಿ ತಾಲೂಕಿನ ಕೃಷಿ ಸಾಧಕರಾದ ನಿಂಬಳಗೆರೆ ಎಚ್.ಕೆ.ಮಂಜುನಾಥ, ಗುಡೇಕೋಟೆ ಜಯಪ್ರಕಾಶ ಗುಪ್ತಾ, ಚಪ್ಪರದಹಳ್ಳಿ ಕೊಟ್ರೇಶಪ್ಪ, ಸಾಸಲವಾಡ ಕೆ.ಎಚ್.ಎಂ.ವೀರಭದ್ರಯ್ಯ ಮತ್ತು ಸಿಡೇಗಲ್ ಆರ್.ಪ್ರೇಮಕುಮಾರ ಅವರನ್ನು ಸನ್ಮಾನಿಸಿ ತಲಾ 10 ಸಾವಿರ ರೂ. ಪ್ರೋತ್ಸಾಹಧನವನ್ನು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವಾಮದೇವ ಕೊಳ್ಳಿ ನೀಡಿದರು. ಕೃಷಿಕರು ರೈತಗೀತೆಯನ್ನು ಹಾಡಿದರು. ಕೃಷಿ ಇಲಾಖೆ ಅಧಿಕಾರಿ ಶ್ರವಣಕುಮಾರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.