ಹುಲಸೂರ: ನರೇಗಾ ಕೂಲಿಕಾರರಿಗೆ ಕೋವಿಡ್ ವ್ಯಾಕ್ಸಿನ್

ಹುಲಸೂರ:ಮೇ.2: ಕಾರ್ಮಿಕರ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಮುಚಳಂಬ ಗ್ರಾಮದಲ್ಲಿ ಶನಿವಾರ ನರೇಗಾ ಕೂಲಿ ಕಾರ್ಮಿಕರಿಗೆ ಕೋವಿಡ್-19 ಲಸಿಕೆ ನೀಡಲಾಯಿತು.

ಕರೊನಾ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಹುಲಸೂರ ತಾಲ್ಲೂಕು ಪಂಚಾಯತ್ ಹಾಗೂ ಮುಚಳಂಬ ಗ್ರಾಮ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಲಸಿಕೆ ವಿತರಣೆ ಶಿಬಿರ ಏರ್ಪಡಿಸಲಾಗಿತ್ತು. ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ತಾಪಂ ಸಹಾಯಕ ನಿರ್ದೇಶಕ ಜಯಪ್ರಕಾಶ ಚವ್ಹಾಣ ಅವರು, ಕರೊನಾ ನಿಯಂತ್ರಿಸಲು ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ. ವೈದ್ಯ ಲೋಕ ಹೇಳಿರುವಂತೆ ಕೋವಿಡ್-19ಗೆ ಸಂಬಂಧಿಸಿದ ಲಸಿಕೆ ತೆಗೆದುಕೊಳ್ಳುವುದರಿಂದ ಕರೊನಾ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಗಾಳಿ ಸುದ್ದಿಗಳಿಗೆ ಕಿವಿಗೊಡದೆ ಲಸಿಕೆ ಪಡೆಯಲು ಹಿಂಜರಿಕೆ ಮಾಡದಿರಿ. ಗ್ರಾಪಂ ವ್ಯಾಪ್ತಿಯ ಎಲ್ಲ ಕೂಲಿಕಾರ್ಮಿಕರು ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳಬೇಕು. ಇತರರಿಗೂ ತೆಗೆದುಕೊಳ್ಳಲು ಪ್ರೇರೆಪಿಸಬೇಕು ಎಂದರು.

ಕೂಲಿ ಕಾರ್ಮಿಕರು ಕೋವಿಡ್ ನಿಯಮಾವಳಿಯಂತೆ ಮಾಸ್ಕ್ ಧರಿಸಿ ಪರಸ್ಪರ ಅಂತರ ಕಾಪಾಡಿಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಅವರು, ನರೇಗಾ ಯೋಜನೆಯಡಿ ಸದ್ಯ ದುಡಿಯೋಣ ಬಾ ಅಭಿಯಾನ ನಡೆಯುತ್ತಿದ್ದು, ಉದ್ಯೋಗಕ್ಕಾಗಿ ವಲಸೆ ಹೋಗದೆ ಅಭಿಯಾನದಡಿ ಕೆಲಸ ಮಾಡಬೇಕು. ಪುರುಷ ಮತ್ತು ಮಹಿಳೆಯರಿಗೆ 289/- ರೂ. ಸಮಾನ ಕೂಲಿ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮುಚಳಂಬ ಗ್ರಾಪಂ ಅಧ್ಯಕ್ಷೆ ಮಾಲಾಶ್ರಿ ಮೇತ್ರೆ, ಪಿಡಿಒ ಓಂಕಾರ್ ಎಸ್. ಬಿರಾದಾರ, ಹುಲಸೂರ ಪಿಡಿಒ ಭೀಮಶೆಪ್ಪ ದಂಡೀನ್, ತಾಲ್ಲೂಕು ತಾಂತ್ರಿಕ ಸಂಯೋಜಕ ಮಲ್ಲಿಕಾರ್ಜುನ್ ನಾವದಗಿ, ಡಾ. ಅಮೀತಾ, ನರ್ಸ್ ರೇಶ್ಮಾ, ಸುಭಾಷ್ ಕಾಮಶೆಟ್ಟೆ, ರವಿ ಕಾಮಣ್ಣಾ ಮತ್ತಿತರರು ಇದ್ದರು.