ಹುಲಸೂರನಲ್ಲಿ ಆಂಬುಲೆನ್ಸ್ ಕೊರತೆ

ಹುಲಸೂರ:ಏ.26: ತಾಲ್ಲೂಕು ಕೇಂದ್ರವಾಗಿರುವ ಹುಲಸೂರನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತುರ್ತು ಸೇವೆಗೆ ಆಂಬುಲೆನ್ಸ್‌ ವ್ಯವಸ್ಥೆ ಇಲ್ಲದ ಕಾರಣ ರೋಗಿಗಳು ಪರದಾಡುವ ಸ್ಥಿತಿ ಇದೆ.

ಗಡಿಭಾಗದ ಹಲವು ಹಳ್ಳಿಯ ಜನರು ಈ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ಆದರೆ, ಇಲ್ಲಿನ ಅವ್ಯವಸ್ಥೆ ಹಾಗೂ ಸಿಬಂದಿ ಕೊರತೆಯ ಕಾರಣ ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುತ್ತಿದ್ದಾರೆ.

‘ದುಬಾರಿ ಶುಲ್ಕ ಇದ್ದರೂ ಜೀವ ಉಳಿಸಿಕೊಳ್ಳಲು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳುವಂತಾಗಿದೆ’ ಎಂದು ರೋಗಿಗಳ ಸಂಬಂಧಿಕರು ಅಳಲು ತೋಡಿಕೊಳ್ಳುತ್ತಾರೆ.

‘ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಕೆಲವು ತಿಂಗಳ ಹಿಂದೆ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಆಮ್ಲಜನಕ ಸರಬರಾಜು ಮಾಡುವ ಕೊಳವೆ ಅಳವಡಿಸಲಾಗಿತ್ತು. ಆದರೆ, ಅದಕ್ಕೆ ಚಾಲನೆ ನೀಡದೆ ತುಕ್ಕು ಹಿಡಿಯುತ್ತಿದೆ.ಆಮ್ಲಜನಕದ ಕೊರತೆಯೂ ಇದೆ. ಎರಡು ಆಕ್ಸಿಜನ್‌ ಸಿಲಿಂಡರ್ ಮಾತ್ರ ಇದ್ದು, ಅವು ಖಾಲಿ ಇವೆ. ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಈ ಹಿಂದೆ ನಡೆದ ವಿಧಾನಸಭೆ ಉಪ ಚುನಾವಣೆಯ ಪ್ರಚಾರದಲ್ಲಿ ಬಳಸಿಕೊಂಡಿದ್ದರ ಪರಿಣಾಮ ಈಗ ಕೊರತೆ ಉಂಟಾಗಿದೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
‘ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕನಿಷ್ಠ ಏಳು ಜನ ವೈದ್ಯರು ಇರಬೇಕು. ಒಟ್ಟು ನಾಲ್ಕು ಜನ ವೈದ್ಯರಿದ್ದು, ಒಬ್ಬರು ಮಾತ್ರ ಕಾಯಂ ಇದ್ದಾರೆ. ಉಳಿದವರು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ‘ಡಿ’ ಗ್ರೂಪ್‌ 9 ನೌಕರರಲ್ಲಿ ಇಬ್ಬರು ಕಾಯಂ ಇದ್ದು, ಮೂವರನ್ನು ಬೇರೆಡೆಗೆ ನಿಯೋಜನೆ ಮಾಡಲಾಗಿದೆ. ಏಳು ತಿಂಗಳಿಂದ ಸಂಬಳ ಇಲ್ಲದೆ ಕಷ್ಟಪಡುವಂತಾಗಿದೆ’ ಎಂಬುದು ಸಿಬ್ಬಂದಿಯ ಅಳಲು.

‘ಹುಲಸೂರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಕ್ಕಪಕ್ಕದ ಹಳ್ಳಿಯ ರೋಗಿಗಳು ಬರುತ್ತಾರೆ. ಬೇಗ ಆಂಬುಲೆನ್ಸ್‌ ವ್ಯವಸ್ಥೆ ಮಾಡಬೇಕು. ಬೇರೆಡೆ ನಿಯೋಜನೆಗೊಂಡ ಸಿಂಬ್ಬಂದಿಯನ್ನು ಮರಳಿ ಮೂಲಸ್ಥಾನಕ್ಕೆ ಸೇವೆಗೆ ಕರೆಸಿಕೊಳ್ಳಲು ಜಿಲ್ಲಾ ಆರೋಗ್ಯ ಅಧಿಕಾರಿಗೆ ಪತ್ರ ಬರೆಯುವುದಾಗಿ’ ತಾಲ್ಲೂಕು ಪಂಚಾಯಿತಿ ಸದಸ್ಯ ಗೋವಿಂದರಾವ ಸೋಮವಂಶಿ ತಿಳಿಸುತ್ತಾರೆ.

‘ನನ್ನನ್ನು ಕೋವಿಡ್‌ ವಾರ್‌ರೂಮ್‌ಗೆ ನೇಮಿಸಲಾಗಿದೆ. ಸೋಮವಾರದ ವರೆಗೆ ಆಮ್ಲಜನಕ, ಮಾಸ್ಕ್‌, ಸ್ಯಾನಿಟೈಸರ್‌ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಶೀಘ್ರವೇ ಕೋವಿಡ್‌ ಕೇಂದ್ರ ತೆರೆಯಲಾಗುವುದು. ಯಾರು ಭಯಪಡುವ ಆಗತ್ಯವಿಲ್ಲ’ ಎಂದು ಡಾ.ಆರಿಪೋದ್ದೀನ್‌ ಅವರು ಮನವಿ ಮಾಡಿದರು.