ಹುಲಬೆಂಚಿಯಲ್ಲ್ಲಿ ಕೆರೆ ನಿರ್ಮಿಸಿ ರೈತರಿಗೆ ಜನ ಜಾನುವಾರುಗಳಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹ

ವಿಜಯಪುರ : ಜು.8:ಬಸವನ ಬಾಗೇವಾಡಿ ತಾಲೂಕಿನ ಹುಲಬೆಂಚಿ ಗ್ರಾಮದಲ್ಲಿ ಕೆರೆ ನಿರ್ಮಿಸಿ ರೈತರಿಗೆ ಹಾಗೂ ಜನ ಜಾನುವಾರುಗಳಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಇಂದು ಹುಲಬೆಂಚಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಇವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಸರಕಾರಿ ಮುಪತ್ ಗೈರಾಣ ಜಾಗೆ ಸರ್ವೆನಂ. 89// ಒಟ್ಟು ಕ್ಷೇತ್ರ 13ಎ-33ಗುಂಟೆ ಜಾಗೆ ಇದ್ದು, ಇದರಲ್ಲಿ ಎರಡು ಎಕರೆ ಜಾಗೆಯನ್ನು ಹಿಂದೂ ಸಮಾಜದ ರುದ್ರಭೂಮಿಗೆ ಮೀಸಲಿರಿಸಲಾಗಿದೆ. ಅದರಲ್ಲಿ ಇನ್ನುಳಿದ 11ಎ-33 ಗುಂಟೆ ಭೂಮಿ ಉಳಿದಿದ್ದು, ಅದರಲ್ಲಿ 10 ಎಕರೆದಷ್ಟು ಭೂಮಿಯನ್ನು ಹುಲಬೆಂಚಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ರೈತರಿಗೆ, ಜಾನುವಾರುಗಳಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಹೊಸದಾಗಿ ಕೆರೆ ನಿರ್ಮಾಣ ಮಾಡಬೇಕೆಂದು ಆಗ್ರಹಪಡಿಸಿದರು.
ಹುಲಬೆಂಚಿ ಗ್ರಾಮದ ರೈತರಾದ ವಿಠ್ಠಲ ಬಿರಾದಾರ ಮಾತನಾಡ ವಿಜಯಪುರ ಜಿಲ್ಲೆಯಲ್ಲಿ ಬರಗಾಲ ಛಾಯೆ ಆವರಿಸಿದ್ದು,ಕುಡಿಯುವ ನೀರಿಗೆ ಹಾಗೂ ಜಾನುವಾರುಗಳಿಗೆ ತೊಂದರೆ ಉಂಟಾಗುತ್ತಿದೆ. ಹುಲಬೆಂಚಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಈ ವಿಷಯ ಕುರಿತು ಪ್ರಸ್ತಾಪ ಮಾಡಿ ಮನವಿ ಸಲ್ಲಿಸಲಾಗಿತ್ತು ಯಾವುದೇ ಕ್ರಮ ಕೈಗೊಂಡಿರುವದಿಲ್ಲ. ಹಾಗೂ ಈ ಹಿಂದೆ ಇದ್ದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಕ್ರಮ ಕೈಗೊಂಡಿರುವದಿಲ್ಲ. ಈ ಕೆರೆ ನಿರ್ಮಾಣದಿಂದ ಸುತ್ತಮುತ್ತಲಿನ 7-8 ಗ್ರಾಮಗಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ಶೀಘ್ರದಲ್ಲಿ 10 ಎಕರೆ ಭೂಮಿಯನ್ನು ಸಂಬಂಧಿಸಿದ ಇಲಾಖೆಯವರು ತಮ್ಮ ಸುಪರ್ದಿಗೆ ತೆಗೆದುಕೊಂಡು ಕೆರೆ ನಿರ್ಮಿಸಿ ನೀರು ಭರ್ತಿಗೆ ಅನುವು ಮಾಡಿಕೊಡಬೇಕೆಂದು ಒತ್ತಾಯಪಡಿಸಿದರು.
ಈ ಸಂದರ್ಭದಲ್ಲಿ ಲಾಲಸಾಬ ಹಳ್ಳೂರ, ವಿಠ್ಠಲ ಬಿರಾದಾರ, ರ್ಯಾವಪ್ಪಗೌಡ ಪೋಲೇಶಿ, ಮಲಿಗೆಪ್ಪ ಸಾಸನೂರ, ಶೇಖಪ್ಪ ಮುರಡಿ, ರಾಮಣ್ಣ ಮನ್ಯಾಳ, ಹೊನಕೇರಪ್ಪ ತೆಲಗಿ ಬ.ಬಾಗೇವಾಡಿ ತಾಲೂಕ ಉಪಾಧ್ಯಕ್ಷರು, ಯಮನಪ್ಪಗೌಡ ಪಾಟೀಲ,ಸಂತೋಷ ಸಾಸನೂರ, ಬಸಪ್ಪ ಸಂಕನಾಳ, ಸಂತೋಷ ಬಿರಾದಾರ, ಸುಭಾಸ ಬಿರಾದಾರ, ಮಾದೇವಪ್ಪ ಬಿರಾದಾರ, ಮುತ್ತಪ್ಪ ಸಂಕನಾಳ, ಈರಪ್ಪ ತೇಲಿ ಉಪಸ್ಥಿತರಿದ್ದರು.