ಹುರುಪಿನಿಂದ ಕೃಷಿ ಚಟುವಟಿಕೆ ಚಾಲನೆ | ತೊಗರಿ ಬಿತ್ತನೆಗೆ ಅನುಕೂಲಭರವಸೆ ಹೆಚ್ಚಿಸಿದ ಮೃಗಶಿರಾ

ಇಂಡಿ:ಜೂ.9:ತಾಲೂಕಿನ ನಾನಾ ಕಡೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗೆ ಸುರಿದ ಮೃಗಶಿರಾ ಮಳೆ ಮುಂಗಾರು ಬಿತ್ತನೆಯ ಭರವಸೆ ಹೆಚ್ಚಿಸಿದ್ದು ರೈತರು ಹುರುಪಿನಿಂದ ಬಿತ್ತನೆಯ ಪೂರಕ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಎಲ್ಲ ಕಡೆ ಉತ್ತಮ ಮಳೆ ಆಗುತ್ತಿರುವದರಿಂದ ಬಿತ್ತನೆ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಳವಾಗುವ ನಿರೀಕ್ಷೆ ಹುಟ್ಟಿಸಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
ಇಂಡಿ ತಾಲೂಕಿನಲ್ಲಿ ಶುಕ್ರವಾರ ಇಂಡಿಯಲ್ಲಿ 14.8 ಮಿ.ಮಿ, ನಾದ ಬಿಕೆ 28 ಮಿ.ಮಿ,ಅಗರಖೇಡ 10.3 ಮಿ.ಮಿ, ಹೋರ್ತಿ 11.2 ಮಿ.ಮಿ, ಝಳಕಿ 58.4 ಮಿ.ಮಿ ಮಳೆಯಾಗಿದೆ.
ಇಂಡಿ,ಅಗರಖೇಡ, ಸಾಲೋಟಗಿ,ತಾಂಬಾ, ಝಳಕಿ,ಹೊರ್ತಿನಾದ ಬಿಕೆ ಸೇರಿದಂತೆ ಅನೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು ತೊಗರಿ, ಮೆಕ್ಕೆಜೋಳ ಬಿತ್ತನೆ ಸಿದ್ದತೆಗೆ ಅನುಕೂಲವಾಗಿದೆ. ಕೃಷಿ ಇಲಾಖೆ ಈಗಾಗಲೇ ಬಿತ್ತನೆ ಬೀಜ ತೊಗರಿ, ಮೆಕ್ಕೆಜೋಳ, ರಸಗೊಬ್ಬರ ವಿತರಣೆ ಆರಂಭಿಸಿದೆ.
ಕಳೆದ ವರ್ಷ ಇದೇ ಹೊತ್ತಿಗೆ 3.92 ರಷ್ಟು ಬಿತ್ತನೆ ಯಾಗಿತ್ತು, ಈ ಬಾರಿ ಶೇ 8.66 ರಷ್ಟು ಬಿತ್ತನೆಯಾಗಿದೆ.