ಹುಮನಾಬಾದ್ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಅದೃಷ್ಟಲಕ್ಷ್ಮಿ ಯಾರಿಗೆ ಒಲಿಯಲಿದೆ ಎನ್ನುವುದು ಕಾದು ನೋಡಬೇಕಿದೆ

(ಶಿವಶರಣ ಚಾಂಗಲೇರಿ)

ಹುಮನಾಬಾದ್ :ಮೇ.2: ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಪ್ರಬಲ ಅಭ್ಯರ್ಥಿಗಳು ಕಣದಲ್ಲಿರುವ ಕಾರಣಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ, ಮೂರೂ ಪಕ್ಷಗಳ ಅಭ್ಯರ್ಥಿಗಳು ತಮ್ಮ ರಣನೀತಿಯನ್ನು ದಿನ ಕಳೆದಂತೆಲ್ಲಾ ಮೊನಚುಗೊಳಿಸುತ್ತಾ ಹೊರಟಿದ್ದಾರೆ.

ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ರಾಜಶೇಖರ ಪಾಟೀಲ್, ಬಿಜೆಪಿ ಅಭ್ಯರ್ಥಿ ಡಾ. ಸಿದ್ದು ಪಾಟೀಲ್ ಮತ್ತು ಜೆಡಿಎಸ್ ಅಭ್ಯರ್ಥಿ ಸಿಎಂ. ಫೈಜ್ ಮಧ್ಯೆ ಬಿರುಸಿನ ಸ್ಪರ್ಧೆ ನಡೆಯುತ್ತಿದೆ.

ಹುಮನಾಬಾದ್ ಮತಕ್ಷೇತ್ರದಲ್ಲಿ ಸುಮಾರು 2.33 ಲಕ್ಷಕ್ಕೂ ಅಧಿಕ ಮತದಾರರಿದ್ದು, ಇದರಲ್ಲಿ ಪುರುಷ ಮತದಾರರು 1,21,884, ಮಹಿಳಾ ಮತದಾರರು 1,11,681 ಒಟ್ಟು ಮತದಾರರು 2,33,577 ಮತದಾರರು ಇದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಎಲ್ಲ ಸಮುದಾಯಗಳ ಮತದಾರರನ್ನು ಓಲೈಸುವ ಪ್ರಕ್ರಿಯೆ ಕ್ಷೇತ್ರದಾದ್ಯಂತ ಬಿರುಸಾಗಿ ನಡೆದಿದೆ.

2023ರ ವಿಧಾನಸಭೆ ಚುನಾವಣೆಯ ಹುಮನಾಬಾದ್ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಹಗ್ಗ-ಜಗ್ಗಾಟದಲ್ಲಿ ಈ ಬಾರಿ ಯಾರ ಪರವಾಗಿ ಹೆಚ್ಚಾಗಿ ಮತದಾರರು ವಾಲುತ್ತಾರೆ ಎಂಬುವುದನ್ನು ಕಾದು ನೋಡಬೇಕಾಗಿದೆ.

ಕ್ಷೇತ್ರದಲ್ಲಿರುವ ಲಿಂಗಾಯತ, ದಲಿತ, ಮುಸ್ಲಿಂ, ಕೋಲಿ ಮತ್ತು ಕುರುಬ ಸಮುದಾಯದ ಮತದಾರರೊಂದಿಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಆರೋಗ್ಯಪೂರ್ಣ ಸಂಬಂಧ ಕಾಯ್ದುಕೊಂಡಿದ್ದಾರೆ. ಈ ಸಂಬಂಧವು ಮತದಾನದ ವೇಳೆ ಎಷ್ಟರಮಟ್ಟಿಗೆ ಅಭ್ಯರ್ಥಿಗಳ ಪರ ಚಲಾವಣೆ ಆಗಲಿದೆ ಎನ್ನುವುದು ಸ್ಪಷ್ಟ ನಿಲುವು ಸಿಗುತ್ತಿಲ್ಲ.

ಕಳೆದ 3 ಅವಧಿಗೆ ಶಾಸಕರಾಗಿ ಅಧಿಕಾರ ನಿರ್ವಹಣೆ ಮಾಡಿದ ರಾಜಶೇಖರ ಪಾಟೀಲ್ ಅವರ ಹಿಡಿತ ಉತ್ತಮವಾಗಿದೆ. ಮೊದಲ ಪ್ರಯತ್ನದಲ್ಲಯೇ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡ ಡಾ. ಸಿದ್ದು ಪಾಟೀಲ್ ಬೆನ್ನಿಗೆ ಯುವ ಶಕ್ತಿ ನಿಂತಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಮುಸ್ಲಿಂ ಸಮುದಾಯದ ನಿರೀಕ್ಷಿತ ಮತಗಳಿಗಿಂತಲು ಹೆಚ್ಚಿನ ಮತಗಳು ಬರಬಹುದು ಎನ್ನುವ ಭರವಸೆಯ ಆಧಾರದ ಮೇಲೆ ಮೂರು ಪಕ್ಷದ ಅಭ್ಯರ್ಥಿಗಳು ನಾ ಮುಂದ ತಾ ಮುಂದ ಎಂದು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ರಾಜಶೇಖರ ಪಾಟೀಲ್ 31,814 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. 2ನೇ ಸ್ಥಾನದಲ್ಲಿ ಬಿಜೆಪಿ ಸುಭಾಷ ಕಲ್ಲೂರ 43,131 ಮತಗಳನ್ನು ಪಡೆದಿದ್ದರು. 3ನೇ ಸ್ಥಾನದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ನಸೀಮುದ್ದಿನ್ ಪಟೇಲ್ 34,280 ಪಡೆದಿದ್ದರು.


ಹುಮನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ 2023ರ ವಿಧಾನಸಭೆ ಚುನಾವಣೆಗೆ ಮೊದಲ ಬಾರಿ ಮುಖಕ್ಕೆ ಅವಕಾಶ ನೀಡಲಾಗಿದೆ. ಸ್ಥಳೀಯ ಶಾಸಕ ರಾಜಶೇಖರ ಪಾಟೀಲ್ ರ ಸಹೋದರ ಸಂಬಂಧಿಯಾಗಿರುವ ಡಾ. ಸಿದ್ದು ಪಾಟೀಲ್ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಕೈ ಕೋಟೆಯಲ್ಲಿ ಕಮಲ ಅರಳಿಸಲೇಬೇಕು ಎನ್ನುವ ಉದ್ದೇಶದೊಂದಿಗೆ ಬಿಜೆಪಿ ಹೊಸ ಮುಖಕ್ಕೆ ಟಿಕೆಟ್ ನೀಡಿದೆ.

ಡಾ. ಸಿದ್ದು ಪಾಟೀಲ್ ಕಳೆದ ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಹುಮನಾಬಾದ್ ಕ್ಷೇತ್ರದಲ್ಲಿ ಹೊಸ ಮುಖಕ್ಕೆ ಚುನಾವಣೆಯ ಸ್ಪರ್ಧೆಗಿಳಿಸಿರುವ ಬಿಜೆಪಿ ಪಕ್ಷ ಹುಮನಾಬಾದ್ ಕ್ಷೇತ್ರದ ಹಾಲಿ ಶಾಸಕ ರಾಜಶೇಖರ ಪಾಟೀಲ್ ಅವರಿಗೆ ಸೆಡ್ಡು ಹೊಡೆದು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷವನ್ನು ಸೇರಿರುವ ಡಾ. ಸಿದ್ದು ಪಾಟೀಲ್ ಮೊದಲ ಪ್ರಯತ್ನದಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಪಡೆದುಕೊಂಡಿದ್ದಾರೆ.

ಹಾಲಿ ಶಾಸಕರಿಗೆ ನೇರ ಸ್ಪರ್ಧೆ ಒಡ್ಡುವ ಮೂಲಕ ಹುಮನಾಬಾದ್ ಕ್ಷೇತ್ರದ ಹಾಲಿ ಶಾಸಕರ ಸಹೋಹರ ಸಂಬಂಧಿಗೆ ಕರೆ ತಂದು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿರುವುದು ವಿಶೇಷವಾಗಿದೆ.

ಗೆಲುವಿನ ಲೆಕ್ಕಚಾರದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷದ ಅಭ್ಯರ್ಥಿಗಳು ಯಾವ ಯಾವ ರಾಜಕೀಯ ತಂತ್ರಗಳು ಬಳಸಿಕೊಂಡು ಪಕ್ಷದ ಗೆಲುವಿಗಾಗಿ ಮುಂದಾಗುತ್ತಾರೆ ಎಂಬುದು ಕಾದು ನೋಡಬೇಕಿದೆ.