ಹುಮನಾಬಾದನಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆ

ಹುಮನಾಬಾದ :ಮಾ.15: ಪಟ್ಟಣದ ಧನಗರಗಡ್ಡಾ, ಉಪಾರ್ ಓಣಿ ಸೇರಿದಂತೆ ವಿವಿಧ ವಾರ್ಡ್‍ಗಳಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ, ವಿವಿಧ ವಾರ್ಡ್‍ಗಳ ನಿವಾಸಿಗಳು ಪುರಸಭೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ, ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ದಲಿತ್ ಪ್ಯಾಂಥರ್ ಸಂಘಟನೆ ತಾಲೂಕ ಅಧ್ಯಕ್ಷ ಗಣಪತಿ ಅಷ್ಟೂರೆ ಮಾತನಾಡಿ, ಧನಗರ ಗಡ್ಡಾ, ಉಪಾರ ಓಣಿಗಳಲ್ಲಿ ಕಳೆದ ಎರಡು ವಾರದಿಂದ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸವರಾಜ ಸಿಂಧೆ ಮಾತನಾಡಿ, ಪಟ್ಟಣದ ಬಹುತೇಕ ವಾರ್ಡ್‍ಗಳಲ್ಲಿ ಕೊಳವೆ ಬಾವಿಗಳಿದ್ದರೂ ಟ್ಯಾಂಕ್‍ಗೆ ಸಂಪರ್ಕ ಕಲ್ಪಿಸದಿರುವ ಏಕೈಕ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಶೀಘ್ರ ಸಮಸ್ಯೆ ಬಗೆಹರಿಸಬನೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಮೀನಾಕುಮಾರಿ ಸ್ಥಳಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀಕಾಂತ ಜಂಬಗಿ, ಕಿಶನ್ ಸೂರ್ಯವಂಶಿ, ಗುಂಡುರೆಡ್ಡಿ ಪುಟ್ಕಲ್, ಅನೀಲ ಮಲಶೆಟ್ಟಿ, ದಶರಥ ಆರ್ಯ, ಅಂಬಿಕಾ, ಸುಶೀಲಾಬಾಯಿ, ಶೋಭಾ, ಅಂಬಿಕಾ, ಭೀಮಬಾಯಿ, ಸೇರಿದಂತೆ ವಿವಿಧ ವಾರ್ಡ್‍ಗಳ ನೂರಾರು ಮಹಿಳೆಯರು ಇದ್ದರು.