” ಹುಬ್ಬಳ್ಳಿ ರಾಷ್ಟ್ರೋತ್ಥಾನ ಪರಿಷತ್‍ನಿಂದ ರಕ್ತದಾನ ಶಿಬಿರ “

ಕೆರೂರ,ಏ19 : ರಕ್ತದಾನದಂತಹ ಕಾರ್ಯವು ಮುಕ್ಕೋಟಿ ಜೀವಿಗಳಲ್ಲಿಯೇ ಮನುಜ ಕುಲದಲ್ಲಿ ಶ್ರೇಷ್ಠ ಕಾರ್ಯವಾಗಿದ್ದು ಇದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುವ ಜೊತೆಗೆ ರಕ್ತದಾನ ಮಾಡಿದ ವ್ಯಕ್ತಿಯ ಆರೋಗ್ಯದಲ್ಲಿ ರೋಗ ನಿರೋಧಕ ಶಕ್ತಿಯು ವೃದ್ಧಿಸುತ್ತದೆ ಎಂದು ಆಯುಷ್ ಫೇಡರೇಶನ್ ಆಫ್ ಇಂಡಿಯಾ ಹಾಗೂ ರಾಷ್ಟ್ರೋತ್ಧಾನ ಪರಿಷತ್‍ನ ಮುಖಂಡ ಡಾ.ಬಸವರಾಜ ಕೆ ಬೊಂಬ್ಲೆ ಹೇಳಿದರು.
ಅವರು ಪಟ್ಟಣದ ವಿದ್ಯಾವರ್ಧಕ ಸಂಘದ ಎಂ.ಎಚ್. ಮೆಣಸಗಿ ಕಾಲೇಜಿನ ಸಭಾಂಗಣದಲ್ಲಿ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿ ಮತ್ತು ಆರೋಗ್ಯ ಭಾರತಿ ಕೆರೂರ ಸಮಿತಿಯ ಸಹ ಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವರಲ್ಲಿ ಅನಾದಿ ಕಾಲದಿಂದಲೂ ರಕ್ತದಾನದ ಶ್ರೇಷ್ಠ ಕಾರ್ಯವು ಚಾಲನೆಯಲ್ಲಿದ್ದು ಅದು ಆಪತ್ಕಾಲದಲ್ಲಿ ರೋಗಿಗಳಿಗೆ, ಅಪಘಾತಗಳಲ್ಲಿ ಗಾಯಗೊಂಡವರಿಗೆ, ಗರ್ಭೀಣಿ ಮಹಿಳೆಯರಿಗೆ ಮರುಜೀವ ನೀಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.ಇಂದಿನ ಯುವ ಸಮೂಹದಲ್ಲಿ ರಕ್ತದಾನ ದ ಉಪಯುಕ್ತತೆ, ಅದರ ಪಾತ್ರ, ಮಹತ್ವದ ಕುರಿತು ಜಾಗೃತಿ, ಅರಿವು ಮೂಡಿಸುವುದು ಅವಶ್ಯ ಕವಿದ್ದು ರಾಷ್ಟ್ರೋತ್ಥಾನ ಪರಿಷತ್ ಈ ನಿಟ್ಟಿನಲ್ಲಿ ಮಾನವೀಯ ಕಾಯಕದಿಂದ ಶ್ಲಾಘನೀಯ ಸೇವೆ ನೀಡುತ್ತಿದೆ ಎಂದು ಡಾ.ಬಸವರಾಜ ಬೊಂಬ್ಲೆ ಪ್ರಶಂಸಿಸಿದರು.
ರಾಷ್ಟ್ರೋತ್ಥಾನ ರಕ್ತನಿಧಿಯ ಸಂಚಾಲಕ ಶ್ರೀಧರ ಹಳಿಯಾಳ ಅವರು, ರಕ್ತದಾನದಂತಹ ಮಹತ್ವ ದ ಕಾರ್ಯ ಬೇರೊಂದಿಲ್ಲ.ಮಾನವೀಯ ನೆಲೆಗಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿ ಸದೃಢ ಆರೋಗ್ಯ ರೂಢಸಿಕೊಳ್ಳಲು ಮತ್ತು ಉತ್ತಮ ರೋಗ ನಿರೋಧಕತೆ ವೃದ್ಧಿಸಿಕೊಳ್ಳಲು ರಕ್ತದಾನದಂತಹ ಉಪಯುಕ್ತ ಶಿಬಿರಗಳ ಯಶಸ್ವಿಗೆ ಕೈಜೋಡಿಸಬೇಕು ಎಂದರು.
ಶಿಬಿರದಲ್ಲಿ ವೈದ್ಯ ಬಸವರಾಜ ಬೊಂಬ್ಲೆ, ಪ.ಪಂಚಾಯ್ತಿ ಸದಸ್ಯೆ ಶೋಭಾ ನಾಗೇಶ ಛತ್ರಬಾನ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ನಾಗರಿಕರು, ಯುವ ಪ್ರಮುಖರು, ಯೋಗ ಶಿಬಿರದ ಮಹಿಳೆಯರು ತಮ್ಮ ರಕ್ತದಾನ ಮಾಡಿದರು.ರಾಷ್ಟ್ರೋತ್ಧಾನ ಪರಿಷತ್‍ನಿಂದ ಅವರೆಲ್ಲರಿಗೆ ಪ್ರಶಂ ಸಾ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಘವೇಂದ್ರ ಕಂದಕೂರ, ವಿನಯ ಪರದೇಶಿ, ಮಹಾಂತೇಶ ಸಣ್ಣೂರ, ವಿನಾಯಕ ಧಡಿ, ನವೀನ ಕ್ವಾಣ್ಣೂರ, ಹನಮಂತ ಮುದಕವಿ, ರಾ.ಪರಿಷತ್‍ನ ಧುರೀಣರು, ಸದಸ್ಯರು ಮುಂತಾದವರು ಪಾಲ್ಗೊಂಡಿದ್ದರು.