ಹುಬ್ಬಳ್ಳಿ ಘಟನೆ: ಕಠಿಣ ಕಾನೂನು ಕ್ರಮ: ಪ್ರಿಯಾಂಕ್ ಖರ್ಗೆ

ಕಲಬುರಗಿ,ಏ.20: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇಲ್ಲಿನ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆಗಳು ನಡೆಯಬಾರದು. ಆದರೂ ನಡೆದು ಹೋಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷ ಸಹ ಈ ಘಟನೆಯನ್ನು ಪ್ರಬಲವಾಗಿ ಖಂಡಿಸುತ್ತದೆ. ಮೇಲಾಗಿ, ಎನ್.ಎಸ್.ಯು.ಐ, ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಘಟಕಗಳು ಸಹ ಈ ಘಟನೆಯನ್ನು ಖಂಡಿಸಿವೆ. ನ್ಯಾಯ ಸಿಗಲು ಏನು ಮಾಡಬೇಕು ಅದನ್ನು ಸರ್ಕಾರ ಮಾಡಲಿದೆ. ಒಂದು ಕುಟುಂಬದಲ್ಲಿ ಇಂತಹ ಘಟನೆಗಳು ನಡೆದಾಗ ನೋವಾಗುತ್ತದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಆದರೆ, ಇಂತಹ ಘಟನೆಗಳಲ್ಲಿ ರಾಜಕೀಯ ಮಾಡಬಾರದು ಎಂದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿದರು.
ರಾಜ್ಯಕ್ಕೆ ಮತ್ತೊಮ್ಮೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಅವರ ಭೇಟಿ ಆಯಾ ರಾಮ್ ಗಯಾ ರಾಮ್ ಆಗಬಾರದು. ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಒಮ್ಮೆಯಾದರೂ ಅವರು ಹೇಳಬೇಕು. ಅವರಿಗೆ ನಾವು ಈ ಹಿಂದೆಯೂ ಸ್ವಾಗತ ಮಾಡಿದ್ದೇವೆ, ಈಗಲೂ ಸ್ವಾಗತಿಸುತ್ತೇವೆ. ಈ ರಾಜ್ಯಕ್ಕೆ ತಾವು ಏಕೆ ಚೊಂಬು ಕೊಟ್ಟಿದ್ದೀರಿ ಎಂದು ನಾವು ಕೇಳುತ್ತಿದ್ದೇವೆ. ತೆರಿಗೆ ಪರಿಹಾರ, ಬರ ಪರಿಹಾರ ಸೇರಿದಂತೆ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾಗಿರುವ ಪರಿಹಾರ ನೀಡಿಲ್ಲ. ನರೇಗಾ ಅಡಿ ಮಾನವ ದಿನಗಳ ಹೆಚ್ಚಳಕ್ಕೆ ಮನವಿ ಮಾಡಿದ್ದೇವೆ. ಅದನ್ನೂ ಕೂಡ ಮಾಡಿಲ್ಲ. ಇದೆಲ್ಲಕ್ಕೂ ಮೋದಿ ಅವರು ಬಂದು ಉತ್ತರ ಕೊಡಬೇಕು ಎಂದು ಸವಾಲು ಹಾಕಿದರು.
ತಮ್ಮನ್ನು ಕಿಂಗ್ ಪಿನ್ ಎಂದು ಕರೆದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಅವರಿಗೆ ಮಾಹಿತಿ ಕೊರತೆ ಇದೆ. ದಿವ್ಯಾ ಹಾಗರಗಿ ಮನೆಗೆ ಬಿಜೆಪಿ ಅಭ್ಯರ್ಥಿ ಯಾಕೆ ಹೋಗಿದ್ದರು ಎಂಬುದಕ್ಕೆ ಉತ್ತರ ನೀಡುವಂತೆ ಕೋರಲಾಗಿತ್ತು. ಅದಕ್ಕೆ ನನ್ನನ್ನೇ ಕಿಂಗ್ ಪಿನ್ ಅಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ನಾಲ್ಕು ವರ್ಷ ಅವರದೇ ಸರ್ಕಾರ ಇತ್ತಲ್ಲ. ಆಗ ಯಾಕೆ ತಮ್ಮನ್ನು ಜೈಲಿಗೆ ಹಾಕಿಸಲಿಲ್ಲ? ಅಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಆರೋಪಿ ಮನೆಗೆ ಹೋಗಿ ಗೋಡಂಬಿ ದ್ರಾಕ್ಷಿ ತಿಂದು ಬಂದಿದ್ದು ನಿಜ ತಾನೇ? ಎಂದು ಮರುಪ್ರಶ್ನೆ ಹಾಕಿದರು.
ಉಮೇಶ್ ಜಾಧವ್ ಮಾನ ಮರ್ಯಾದೆ ಬಿಟ್ಟು ಚುನಾವಣೆಗೆ ನಿಂತಿದ್ದಾರೆ. ಮತಯಾಚಿಸಲು ಜೈಲಿಗೆ ಬೇಕಾದರೂ ಹೋಗಲಿ ಯಾರು ಬೇಡ ಅನ್ನುವುದಿಲ್ಲ. ಆದರೆ ನೈತಿಕತೆ ಬೇಡವಾ? ಮೊದಲು ಮಾಲೀಕಯ್ಯ ಗುತ್ತೇದಾರ ಬೇಕಾಗಿತ್ತು ಹೋಗಿ ಅವರ ಕಾಲು ಹಿಡಿದರು. ಈಗ ಆರ್ ಡಿ ಪಾಟೀಲ್ ಬೇಕಾಗಿದೆ ಈಗ ಅವರ ಮನೆಗೆ ಹೋಗಿ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಾಲೀಕಯ್ಯ ಗುತ್ತೇದಾರ ಅವರು ಮೊದಲು ನಮ್ಮ ಪಕ್ಷದಲ್ಲೇ ಇದ್ದರು. ಕಾರಣಾಂತರಗಳಿಂದ ಬಿಟ್ಟು ಹೋಗಿದ್ದರು. ನನ್ನ ಹೇಳಿಕೆಗಿಂತ ಅವರ ಹೇಳಿಕೆಗೆ ಮಹತ್ವವಿದೆ. ಬಿಜೆಪಿಯವರು ಸಮಾಜ ಮಾತ್ರ ಒಡೆಯುತ್ತಿಲ್ಲ ಕುಟುಂಬವನ್ನೂ ಒಡೆಯುತ್ತಾರೆ ಎಂದು ಅವರೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಯಿಸಿದರು.


ಅಸ್ತಿತ್ವಕ್ಕಾಗಿ ಎಚ್.ಡಿ.ಕೆ ಹೋರಾಟ
ಕುಮಾರಸ್ವಾಮಿ ಅವರ ಹೋರಾಟ ಕೇಂದ್ರದ ವಿರುದ್ದ ಅಲ್ಲವೇ ಅಲ್ಲ. ಅವರೇನಿದ್ದರೂ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಚೊಂಬು ಜಾಹೀರಾತಿಗೆ ಕುಮಾರಸ್ವಾಮಿ ಲೇವಡಿ ಕುರಿತು ಪ್ರಸ್ತಾಪಿಸಿದ ಅವರು, ಜೆಡಿಎಸ್ ಕಾರ್ಯಕರ್ತರಿಗೆ ಎಚ್.ಡಿ.ಕೆ ಚೊಂಬು ಕೊಟ್ಟಿದ್ದಾರೆ. ಎಲೆಕ್ಷನ್ ಮುಗಿದ ಬಳಿಕ ಸಾಕಷ್ಟು ರಾಜಕೀಯ ಬದಲಾವಣೆ ಆಗುತ್ತದೆ ಎಂದು ಅವರೇ ಹೇಳಿದ್ದಾರಲ್ಲ ಎಂದರು.