ಹುಬ್ಬಳ್ಳಿಯಲ್ಲಿ ಭಾರಿ ಮನೆ ದರೋಡೆ ಕೋಟ್ಯಾಂತರ ಮೌಲ್ಯದ ನಗದು, ಚಿನ್ನಾಭರಣ ಲೂಟಿ!

ಹುಬ್ಬಳ್ಳಿ, ಸೆ21: ದರೋಡೆಕೋರರ ಗುಂಪೊಂದು ಮನೆಯವರನ್ನು ಕಟ್ಟಿಹಾಕಿ ಕೋಟ್ಯಾಂತರ ರೂ. ಮೌಲ್ಯದ ನಗದು, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಿನ್ನೆ ಬಸವೇಶ್ವರ ನಗರದಲ್ಲಿ ನಡೆದಿದೆ.
ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್‍ನಲ್ಲಿರುವ ವಿದ್ಯಾಮಂದಿರ ಬುಕ್ ಡಿಪೋ ಮಾಲಿಕರಾದ ಉಲ್ಲಾಸ ದೊಡ್ಡಮನಿ ಎಂಬುವವರ ಮನೆಯಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.
ಮನೆ ಕಿಟಕಿಯ ಕಬ್ಬಿಣದ ಗ್ರಿಲ್ ಮುರಿದು ಮನೆಯೊಳಗೆ ಹೊಕ್ಕ ದರೋಡೆಕೋರರ ತಂಡ, ಮಲಗಿದ್ದವರ ಕೈಕಾಲು ಕಟ್ಟಿಹಾಕಿದೆ.
ನಂತರ ಮನೆಯಲ್ಲಿದ್ದ ಸುಮಾರು ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಎತ್ತಿಕೊಂಡು ಪರಾರಿಯಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಗೋಕುಲ ರೋಡ ಠಾಣೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತಂತೆ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಕೊಳ್ಳಲಾಗುತ್ತಿದೆ.
ತಡರಾತ್ರಿಯ ನೀರವತೆಯಲ್ಲಿ ನೇರವಾಗಿ ಮನೆಗೆ ನುಗ್ಗಿದ ದರೋಡೆಕೋರರು ಮಿಂಚಿನಂತೆ ಕೈಚಳಕ ತೋರಿದ್ದು, ಘಟನೆ ನಗರದ ಜನತೆಯಲ್ಲಿ ಆತಂಕವನ್ನಂತೂ ಮೂಡಿಸಿದೆ.