ಹುಬ್ಬಳ್ಳಿಗೆ ಏಮ್ಸ್ : ಕೇಂದ್ರಕ್ಕೆ ಪತ್ರ ಬರೆದಿಲ್ಲ – ಮುಖ್ಯಮಂತ್ರಿ ಸುಳ್ಳು ಬಹಿರಂಗ ಪಡಿಸಿದ ರಾಜ್ಯ ಸಚಿವರ ಪತ್ರ

ಜಿಲ್ಲೆಯಲ್ಲಿ ಏಮ್ಸ್ ಮಾದರಿ ಆಸ್ಪತ್ರೆಗೆ ಶಿಫಾರಸ್ಸು : ಉತ್ತರ ಕರ್ನಾಟಕದ ಬಿಜೆಪಿ ಸಚಿವರಿಂದ ಜಿಲ್ಲೆಗೆ ಮತ್ತೊಂದು ಮೋಸ
ರಾಯಚೂರು.ಸೆ.೨೩- ಹುಬ್ಬಳ್ಳಿ-ಧಾರವಾಡನಲ್ಲಿ ಏಮ್ಸ್ ಸ್ಥಾಪನೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಕೇಂದ್ರದ ತಂಡವೂ ಹುಬ್ಬಳ್ಳಿ-ಧಾರವಾಡ ಭಾಗದ ಇಟಗಟ್ಟ ಗ್ರಾಮದ ಬಳ್ಳಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಕೇಂದ್ರ ಮಂಡಳಿ ವ್ಯಾಪ್ತಿಯ ಸ್ಥಳ ಪರೀಕ್ಷೆಯೂ ಮಾಡಿರುವ ಬಗ್ಗೆ ಲಿಖಿತ ಮಾಹಿತಿಯೊಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಕೆ.ಸುಧಾಕರ ಅವರ ಲಿಖಿತ ಹೇಳಿಕೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸುಳ್ಳು ಬಹಿರಂಗಗೊಳ್ಳುವಂತೆ ಮಾಡಿದೆ.
ಆಗಸ್ಟ್ ೨೭ ರಂದು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಏಮ್ಸ್ ಹೋರಾಟ ಮುಖಂಡರೊಂದಿಗೆ ಆರಾಧಾನ ಆಸ್ಪತ್ರೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಹುಬ್ಬಳ್ಳಿ -ಧಾರವಾಡ ಜಿಲ್ಲೆಗಳಲ್ಲಿ ಏಮ್ಸ್ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿಲ್ಲವೆಂದು ಹೇಳಿಕೆ ನೀಡಿದ್ದರು. ಆದರೆ, ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರು ನಿಯಮ ೭೩ ರ ಅಡಿ ಪ್ರಸ್ತಾಪಿಸಿದ, ಗಮನ ಸೆಳೆಯುವ ಸೂಚನೆಗೆ ಸಚಿವ ಡಾ.ಕೆ.ಸುಧಾಕರ ಅವರು ನೀಡಿದ ಹೇಳಿಕೆ ಹುಬ್ಬಳ್ಳಿ, ಧಾರವಾಡಕ್ಕೆ ಏಮ್ಸ್ ಕೇಳಿ ಪತ್ರ ಬರೆದಿಲ್ಲವೆಂಬ ಹೇಳಿಕೆ ಸುಳ್ಳು ಎನ್ನುವುದು ಈಗ ಸಾಬೀತುಗೊಂಡಂತಾಗಿದೆ.
ಸಚಿವ ಸುಧಾಕರ ಅವರ ಉತ್ತರದಲ್ಲಿ ಜಿಲ್ಲೆಗೆ ಏಮ್ಸ್ ದೊರೆಯುವುದಿಲ್ಲ ಎನ್ನುವ ಶಂಕೆಯ ಅನೇಕ ಸಂಶಯಗಳಿವೆ. ಅಲ್ಲದೆ, ಏಮ್ಸ್ ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ಬಿಡುವ ತಂತ್ರದ ಮೂಲಕ ಐಐಟಿ ಮಾದರಿಯಲ್ಲಿ ಏಮ್ಸ್ ಮಂಜೂರಾತಿಯಲ್ಲೂ ಮತ್ತೊಂದು ಮೋಸದ ತಂತ್ರವನ್ನು ರಾಜ್ಯ ಬಿಜೆಪಿ ಸರ್ಕಾರ ರೂಪಿಸಿದೆ. ಈ ಹಿಂದೆ ಐಐಟಿಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಮೂರು ಹೆಸರುಗಳನ್ನು ರಾಯಚೂರು ಸೇರಿ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಹೆಸರುಗಳನ್ನು ಕೇಂದ್ರಕ್ಕೆ ಶಿಫಾರಸ್ಸುಗೊಳ್ಳುವಂತೆ ತಂತ್ರ ರೂಪಿಸಿ, ಕೊನೆ ಹಂತದಲ್ಲಿ ಬಿಜೆಪಿಯ ಕೇಂದ್ರ ಸರ್ಕಾರದ ಪ್ರಭಾವಿ ಸಚಿವರು ಐಐಟಿಯನ್ನು ಹುಬ್ಬಳ್ಳಿಗೆ ಮಂಜೂರಾಗುವಂತೆ ಮಾಡಲಾಗಿತ್ತು. ಈಗ ಅದೇ ಮಾದರಿಯಲ್ಲಿ ಮತ್ತೊಂದು ಕುತಂತ್ರ ನಡೆದಿದೆ ಎನ್ನುವುದಕ್ಕೆ ಸಚಿವ ಡಾ.ಸುಧಾಕರ ಅವರ ಉತ್ತರ ನಿದರ್ಶನವಾಗಿದೆ.
ಉತ್ತರದ ಸಮಗ್ರ ಮಾಹಿತಿ ಈ ರೀತಿಯಲ್ಲಿದೆ. ಭಾರತ ಸರ್ಕಾರದ ಪ್ರಧಾನಮಂತ್ರಿ ಸ್ವಸ್ಥ್ಯ ಸುರಕ್ಷ ಯೋಜನೆಯಡಿ ‘ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ‘ (ಆಲ್ ಇಂಡಿಯಾ ಇನ್ಸ್‌ಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಸೂಪರ್ ಸ್ಪೇಷಾಲಿಟಿ ಬೋಧಕ ಸಂಸ್ಥೆಯನ್ನು ವಿವಿಧ ರಾಜ್ಯಗಳಲ್ಲಿ ಪ್ರಾರಂಭಿಸುವ ಹೊಣೆ ಭಾರತ ಸರ್ಕಾರದ್ದಾಗಿರುತ್ತದೆ. ಅದರಂತೆ ಇಂತಹ ಸಂಸ್ಥೆಗಳನ್ನು ಹೊಂದುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾರುತ್ತದೆ. ಈ ಯೋಜನೆಯ ಮಾನದಂಡಗಳನ್ವಯ ೨೦೦ ಎಕರೆ ಜಮೀನು, ೪ ಪಥಗಳ ಸಾರಿಗೆ ಸಂಪರ್ಕ, ನೀರು, ವಿದ್ಯುತ್ ಸಂಪರ್ಕ ಮತ್ತು ಇತರೆ ಸಂಸ್ಥೆಗಳನ್ನು ಹೊಂದಿರುವ ಸ್ಥಳಗಳನ್ನು ರಾಜ್ಯ ಸರ್ಕಾರ ಗುರುತಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಪ್ರಾರಂಭಿಕವಾಗಿ ರಾಮನಗರ ಧಾರವಾಡ, ಬಿಜಾಪೂರು, ಕಲ್ಬುರ್ಗಿ ಜಿಲ್ಲೆಗಳಲ್ಲಿ ಏಮ್ಸ್ ಸಂಸ್ಥೆ ಸ್ಥಾಪಿಸಲು ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ೧೮-೦೯-೨೦೨೦ ರಂದು ಧಾರವಾಡ ಜಿಲ್ಲಾಧಿಕಾರಿಯ ಕಾರ್ಯಾಲಯದಿಂದ ಧಾರವಾಡ ತಾಲೂಕಿನ ಇಟಗಟ್ಟಿ ಗ್ರಾಮದ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಭೂ ಸ್ವಾಧೀನ ಪಡೆಸಿಕೊಂಡಿರುವ ಜಾಗವೂ ಏಮ್ಸ್ ಸಂಸ್ಥೆಯನ್ನು ಪ್ರಾರಂಭಿಸುವುದಕ್ಕೆ ಹಾಗೂ ಕೇಂದ್ರ ಸರ್ಕಾರವೂ ನಿಗದಿ ಪಡಿಸಿರುವ ಮಾನದಂಡಗಳನ್ವಯ ಪೂರೈಸಲು ಸದರಿ ಸ್ಥಳವೂ ಸೂಕ್ತವಾಗಿದೆಂಬ ನಿರ್ಣಯಕ್ಕೆ ಬಂದು ಹುಬ್ಬಳ್ಳಿ, ಧಾರವಾಡನ ಜಾಗ ಮತ್ತು ಇತರೆ ಮಾಹಿತಿಯೊಂದಿಗೆ ಕೇಂದ್ರ ಸರ್ಕಾರಕ್ಕೆ ೨೯-೦೯-೨೦೨೦ ರಂದು ಪತ್ರ ಬರೆಯಲಾಗಿದೆ.
ಕೇಂದ್ರದ ತಪಾಸಣೆ ತಂಡವೂ ಈಗಾಗಲೇ ಗುರುತಿಸಲ್ಪಟ್ಟ ಹುಬ್ಬಳ್ಳಿ-ಧಾರವಾಡ ಸ್ಥಳಕ್ಕೆ ೨-೧೨-೨೦೨೦ ರಂದು ಭೇಟಿ ನೀಡಿ, ಪರಿಶೀಲಿಸಿತ್ತು. ತದನಂತರ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಮಾದರಿ ಸಂಸ್ಥೆಯನ್ನು ಮಂಜೂರಿ ಮಾಡುವಂತೆ ಹಿಂದಿನ ಮುಖ್ಯಮಂತ್ರಿ ಕರ್ನಾಟಕ ಸರ್ಕಾರದಿಂದ ಪ್ರಧಾನಮಂತ್ರಿಗಳಿಗೆ ೯-೪-೨೦೨೧ ರಂದು ಪತ್ರ ಬರೆದಿದ್ದಾರೆ. ಏಮ್ಸ್ ಸಂಸ್ಥೆ ಪ್ರಾರಂಭಿಸುವ ಯೋಜನೆಯೂ ಕೇಂದ್ರ ಸರ್ಕಾರದ್ದಾಗಿದ್ದರಿಂದ ಇದುವರೆಗೆ ಯಾವುದೇ ಸ್ಥಳದಲ್ಲಿ ಏಮ್ಸ್ ಸಂಸ್ಥೆ ಆರಂಭಿಸಿರುವುದಿಲ್ಲವೆಂದು ಶಾಸಕ ಬಸವನಗೌಡ ದದ್ದಲ್ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.