ಹುದ್ದೆಗಳ ಶೀಘ್ರ ನೇಮಕಾತಿಗೆ ಆಗ್ರಹ

ಕೆಂಭಾವಿ:ಮೇ.2:ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯಡಿ ಕಲ್ಯಾಣ ಕರ್ನಾಟಕ ಪ್ರದೇಶದ ಪಶು ವೈದ್ಯಕೀಯ ಪರೀಕ್ಷಕರು ಹಾಗೂ ಪಶು ವೈದ್ಯಕೀಯ ಸಹಾಯಕರ ಹುದ್ದೆಗಳ ನೇರ ನೇಮಕಾತಿ ಆದೇಶ ಹಿಂಪಡೆದಿರುವುದಕ್ಕೆ ಡಿಪ್ಲೋಮಾ ಪಶು ಸಂಗೋಪನಾ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವಿದ್ಯಾರ್ಥಿಗಳು, ಸರ್ಕಾರ ಕಳೆದ 11-12 ವರ್ಷಗಳಿಂದ ಪಶು ವೈದ್ಯಕೀಯ ಪರೀಕ್ಷಕರು ಹಾಗೂ ಪಶು ವೈದ್ಯಕೀಯ ಸಹಾಯಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡಿಲ್ಲ. ಈ ವರ್ಷ ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಈ ಹಿಂದೆ ಆನ್‍ಲೈನ್ ಅರ್ಜಿ ಸಲ್ಲಿಸಲು ಅಧಿಕೃತವಾಗಿ ಪ್ರಕಟಣೆ ಹೊರಡಿಸಿತ್ತು. ಅದರಂತಯೇ ಹಲವರು ಅರ್ಜಿ ಸಲ್ಲಿಸದರು. ಆದರೆ ಸರ್ಕಾರ ಕೊರೊನಾ ನಿಯಂತ್ರಣ ನೆಪದಲ್ಲಿ ಕರ್ನಾಟಕ ವೃಂದದ ಪಶು ಇಲಾಖೆಯ ಬ್ಯಾಕ್‍ಲಾಗ ಹುದ್ದೆಗಳನ್ನು ತಡೆಹಿಡಿಯಲಾಗಿದೆ ಎಂದು ಸುತ್ತೊಲೆ ಹೊರಡಿಸಿದ್ದಾರೆ. ಮತ್ತೆ ಈಚೆಗೆ ನೇರ ನೇಮಕಾತಿ ಅರ್ಜಿ ಸಲ್ಲಿಸಲು ಅಧಿಕೃತ ಪ್ರಕಟಣೆ ಹೊರಡಿಸಿ ಮತ್ತೆ ತಡೆದಿದೆ. ಇದರಿಂದ ವಿದ್ಯಾರ್ಥಿಗಳಿಗೆ ನಿರಾಸೆ ಉಂಟಾಗಿದೆ ಮತ್ತು ಹಲವು ಕಡೆ ಸಿಬ್ಬಂದಿ ಕೊರತೆ ಕುರಿತು ವರದಿಗಳು ಸಹ ಆಗುತ್ತಿವೆ. ಆದ್ದರಿಂದ ಸರ್ಕಾರ ಈ ಹುದ್ದೆಗಳನ್ನು ಬೇಗ ಭರ್ತಿ ಮಾಡಿಕೊಳ್ಳಲು ಮುಂದಾಗಬೇಕು. ಇಲ್ಲವಾದರೆ ಎಲ್ಲಾ ಪಶು ಸಂಗೋಪನಾ ಡಿಪ್ಲೋ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗುವುದು ಖಚಿತ ಎಂದು ಯಾದಗಿರಿ ಡಿಪ್ಲೋಮಾ ಪಶು ಸಂಗೋಪನಾ ವಿದ್ಯಾರ್ಥಿಗಳ ಸಂಘದ ವೀರಭದ್ರ ಬೈಚಬಾಳ, ಬಾಪುಗೌಡ ತಡಬಿಡಿ, ಶರಣಬಸವ ಬಿಂಗೇರಿ, ಮಲ್ಲಿಕಾರ್ಜುನ ದೋರನಹಳ್ಳಿ, ಜ್ಯೋತಿ ರಾಮಸಮುದ್ರ, ಶಿವ ಕಾಂತಮ, ಪುಷ್ಪ ರಾಮಸಮುದ್ರ, ಉದಯ ರಾಮಸಮುದ್ರ, ಮಹ್ಮದ್ ಅಜರುದ್ದೀನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.