ಹುತಾತ್ಮ ರೈತರಿಗೆ ಶ್ರದ್ಧಾಂಜಲಿ

ಧಾರವಾಡ,ಡಿ 20: ಕೇಂದ್ರ ಸರ್ಕಾರದ ರೈತ ವಿರೋಧಿ ಹಾಗೂ ಕಾಪೆರ್Çರೇಟ್ ಪರ ನೀತಿಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಸಂಘಟನೆಗಳ ಹೋರಾಟದಲ್ಲಿ ಜೀವ ಕಳೆದುಕೊಂಡ ಧೀರ ರೈತರಿಗೆ ಇಂದು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಕರೆಯ ಮೇರೆಗೆ ಇಂದು ಧಾರವಾಡ ಜಿಲ್ಲೆಯಾದ್ಯಂತ ಹಲವಾರು ಗ್ರಾಮಗಳಲ್ಲಿ “ಅಖಿಲ ಭಾರತ ಶ್ರದ್ಧಾಂಜಲಿ ದಿನ”ವನ್ನು ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಆಚರಿಸಲಾಯಿತು.
ಕೇಂದ್ರ ಸರ್ಕಾರದ ರೈತ ವಿರೋಧಿ ಮೂರು ಕರಾಳ ಕೃಷಿ ಕಾನೂನುಗಳನ್ನು ಹಾಗೂ ವಿದ್ಯುತ್ ಮಸೂದೆಯನ್ನು ವಿರೋಧಿಸಿ 2 ಕೋಟಿಗೂ ಅಧಿಕ ರೈತರು ಮಹಿಳೆಯರು, ಮಕ್ಕಳು, ವಯಸ್ಕರು ಕೊರೆಯುವ ಚಳಿಗೆ ಸೆಡ್ಡುಹೊಡೆದು ದೆಹಲಿಯಲ್ಲಿ ಹೋರಾಟದಲ್ಲಿ ತೊಡಗಿದ್ದಾರೆ. ಈ ಹೋರಾಟದಲ್ಲಿ ಅನೇಕರು ಪ್ರಾಣತ್ಯಾಗ ಮಾಡಿದ್ದಾರೆ. ಹುತಾತ್ಮ ರೈತರೆಲ್ಲರಿಗೂ ಇದೇ ಸಂದರ್ಭದಲ್ಲಿ ಗೌರವಾರ್ಪಣೆ ಸಲ್ಲಿಸಿ ಈ ಹೋರಾಟವನ್ನು ಗುರಿ ಮುಟ್ಟಿಸುವ ಪ್ರತಿಜ್ಞೆ ತೆಗೆದುಕೊಳ್ಳಲಾಯಿತು. ಅದೇ ರೀತಿ ಈ ಹೋರಾಟವನ್ನು ಮುಂದುವರಿಸಲು ರೈತರು ಹಾಗೂ ದುಡಿಯುವ ವರ್ಗ ಮುಂದೆ ಬರಬೇಕೆಂದು ಮನವಿ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ, ಸಮಿತಿಯ ಸದಸ್ಯರಾದ ಗೋವಿಂದ ಕೃಷ್ಣಪ್ಪನವರ, ಜಗದೀಶ್ ಪೂಜಾರ್, ಬಸಪ್ಪ ಜೋಗಿ, ಮಾರುತಿ ಪೂಜಾರ, ರಾಮಣ್ಣ ಸಣ್ಣ ಮರಿ, ಗಿರೀಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.