ಹುತಾತ್ಮರ ಸ್ಮಾರಕಗಳಿಗೆ ಭೇಟಿ


ಸಂಜೆವಾಣಿ ವಾರ್ತೆ
:ಬಳ್ಳಾರಿ, ಫೆ.26 ನಗರದ ಹೃದಯ ಭಾಗದಲ್ಲಿರುವ ಗಾಂಧಿ ಭವನದ ಒಳ ಆವರಣದಲ್ಲಿರುವ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮಾರಕ,ಬಿಂಧು ಮಾಧವರ ಸ್ಮಾರಕ, ಮಲ್ಲಸಜ್ಜನ ವ್ಯಾಯಾಮ ಶಾಲೆ,ಟೇಕೂರು ಸುಬ್ರಹ್ಮಣ್ಯ,ವೈ.ಮಹಬಲೇಶ್ವರಪ್ಪ ರಂಗಮಂದಿರಕ್ಕೆ ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿಯ ಮಕ್ಕಳು ಶಾಲಾ ಮುಖ್ಯ ಗುರುಗಳಾದ ರವಿಚೇಳ್ಳಗುರ್ಕಿಯೊಂದಿಗೆ ಇಂದು ಬೆಳಿಗ್ಗೆ ಭೇಟಿ ನೀಡಿ ಹುತಾತ್ಮರ ದರ್ಶನ ಪಡೆದರು.
ನಂತರ ವ್ಯಾಯಾಮ ಶಾಲೆಯಲ್ಲಿ ಉಪಸ್ಥಿತರಿದ್ದ ಹಿರಿಯರನ್ನು ಭೇಟಿಮಾಡಿ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಬಗ್ಗೆ ಮಾಹಿತಿ ಪಡೆದರು.
ಹುತಾತ್ಮರ ಸ್ಮಾರಕವು ದಿನಾಂಕ : 09/08/1946ರಲ್ಲಿ ಸ್ಥಾಪನೆಗೊಂಡಿದೆ.ಇಂದಿಗೂ ಇಲ್ಲಿ ವ್ಯಾಯಾಮ,ಜಿಮ್ ತರಬೇತಿ ಪಡೆಯುವವರ ಸಂಖ್ಯೆ ಕಡಿಮೆ ಆಗಿಲ್ಲ.
ಬಳ್ಳಾರಿ ನಗರದಲ್ಲಿ  ಸ್ವಾತಂತ್ರ್ಯ ಹೋರಾಟಕ್ಕೆ ತಯಾರಿ, ಪೂರ್ವ ಸಿದ್ಧತೆ, ಸಭೆ,ಸಮಾರಂಭ,ಚಳುವಳಿ, ಸತ್ಯಾಗ್ರಹ, ಮುಷ್ಕರ ಇತ್ಯಾದಿಗಳ ಕುರಿತು ತಯಾರಿ,ಚರ್ಚೆ, ತೀರ್ಮಾನ ಎಲ್ಲಾ ಮುಖಂಡರ ಉಪಸ್ಥಿತಿಯಲ್ಲಿ ಗಾಂಧಿ ಭವನದಲ್ಲೇ ನಡೆಯುತ್ತಿದ್ದವು ಎಂಬುದರ ಕುರಿತು ಕೇಳಿ ತಿಳಿದರು.
ಶಿಲ್ಪದಲ್ಲಿ ಕೆತ್ತಲ್ಪಟ್ಟ ವಂದೇ ಮಾತರಂ ಹಾಗೂ ಗಾಂಧೀಜಿ ಅವರ ಹನ್ನೊಂದು ವ್ರತಗಳನ್ನು ಓದಿ ತಿಳಿದರು.ಕೊನೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಮಾಹಿತಿ ಹಂಚಿಕೊಂಡರು.
ನಂತರ ಮುಖ್ಯ ಗುರು ರವಿಚೇಳ್ಳಗುರ್ಕಿ ಮಾತನಾಡಿ ಚಿಕ್ಕ ವಯಸ್ಸಿನಲ್ಲೇ ಖುದ್ದು ಭೇಟಿನೀಡಿ ಮಾಹಿತಿ ಪಡೆದದ್ದುರಿಂದ ನಿಮ್ಮ ಮುಂದಿನ ಉನ್ನತ ವ್ಯಾಸಾಂಗಕ್ಕೆ ಅನುಕೂಲ. ಜೊತೆಗೆ ಶ್ನಾತಕೋತ್ತರ ಪದವಿ ಪಡೆದ ನಂತರ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಪಿ ಎಚ್ ಡಿ ಮಾಡಬಹುದು ಎಂದು ಹೇಳಿದರು.