“ಹುಣ್ಣಿಮೆ ಉತ್ಸವ: ಚರಂಡಿಯಲ್ಲಿ ಹಂಪಿತೇರು ಎಳೆಯಲು ಸುಸ್ತಾದ ಭಕ್ತರು”


ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ.7. ಪ್ರತೀವರ್ಷದ ವಾಡಿಕೆಯಂತೆ, ಪುರಾತನದಿಂದ ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯದಂತೆ ನಿನ್ನೆ ಸಂಜೆ ಸಿರಿಗೇರಿಯಲ್ಲಿ ಶ್ರೀವಿರುಪಾಕ್ಷೇಶ್ವರಸ್ವಾಮಿಯ (ಹಂಪಿತೇರು) ಉತ್ಸವವನ್ನು ನಡೆಸಲಾಯಿತು. ಐತಿಹಾಸಿಕ ನೆಲೆ ಹಂಪಿಯಲ್ಲಿ ನಿನ್ನೆಯ ದಿನ ದವನದ ಹುಣ್ಣಿವೆ ಪ್ರಯುಕ್ತ ಶ್ರೀವಿರುಪಾಕ್ಷೇಶ್ವರಸ್ವಾಮಿ ಮತ್ತು ಪಂಪಾಂಬಿಕೆದೇವಿ ಜೋಡಿ ಉತ್ಸವಗಳು ನಡೆಯುವ ದಿನದಂದು, ಆ ಉತ್ಸವಗಳ ರೂಪವಾಗಿ ಸಿರಿಗೇರಿಯಲ್ಲಿ ಹಂಪಿತೇರು ಉತ್ಸವ ಎಂದು ನಡೆಸಿಕೊಂಡು ಬರಲಾಗುತ್ತಿದೆ. ಗ್ರಾಮದ ಅಗಸೆ ಹತ್ತಿರದ ಬಸವೇಶ್ವರ ಗುಡಿ ಹತ್ತರದಿಂದ ಪ್ರಾರಂಭಗೊಂಡು, ಮಾರೆಮ್ಮದೇವಿ ದೇವಸ್ಥಾನದ ಮುಂದೆ ಸಾಗಿ, ಮುಖ್ಯರಸ್ತೆಯ ಅಂಬೆಡ್ಕರ್ ಸರ್ಕಲ್‍ವರೆಗೆ ಬಂದು ಉತ್ಸವ ಮರಳುತ್ತದೆ. ತೇರು ಸಾಗಿ ಬರುವ ದಾರಿಯಲ್ಲಿ ಸಣ್ಣ ಕಾಲುವೆಯಂತೆ ಹರಿಯುವ ಗ್ರಾಮದ ಮುಖ್ಯ ಚರಂಡಿಯ ನೀರಿನಿಂದ ಜಾಡು ತಪ್ಪಿಸಿ ತೇರನ್ನು ಎಳೆಯಲು ಭಕ್ತರು ಹರಸಾಹಸ ಪಟ್ಟರು. ಕೆಲವು ಕಡೆ ತೇರನ್ನೇ ಎತ್ತಿ ಎತ್ತಿ ಪಕ್ಕಕ್ಕೆ ಇಟ್ಟುಕೊಂಡು ಉತ್ಸವ ಸಂಪ್ರದಾಯವನ್ನು ಪಾಲಿಸಿದರು. ಒಳಚರಂಡಿ ವ್ಯವಸ್ಥೆ ಆಗದೇ ಇಲ್ಲಿನ ನಿವಾಸಿಗಳು ನಿತ್ಯ ಅನುಭವಿಸುತ್ತಿರುವ ಚರಂಡಿವಾಸನೆ, ಕೊಳಕು ನೀರಿನಲ್ಲಿ ತಿರುಗಾಡಿ ಸಂಪ್ರದಾಯ ಪಾಲಿಸುವುದು ಹಬ್ಬಗಳ ಸಂಬ್ರಮವನ್ನೇ ಕಿತ್ತುಕೊಂಡಿದೆ ಎಂದು ಇಲ್ಲಿನ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿರುವುದು ಕಂಡುಬಂತು.