ಹುಣ್ಣಿಮೆಯ ದಿನ ಹನುಮಾನ್ ಜಯಂತಿ ಆಚರಣೆ

ಆಂಜನೇಯ ಸ್ವಾಮಿಯು ಶಿವನ ೧೧ನೇ ಅವತಾರ

  • ಮೇಟಿಗೌಡ – ಸಂಜೆವಾಣಿ *
  • ವಿಶೇಷ ಲೇಖನ *
    ಆಂಜನೇಯನೆಂದರೆ ಧೈರ್ಯ ಕೊಡುವ ದೇವರು. ಭಕ್ತಿಗೆ, ಶಕ್ತಿಗೆ ಹೆಸರಾದ ದೇವರು.
    ಚಿರಂಜೀವಿಗಳಲ್ಲೊಬ್ಬನಾದ ಆಂಜನೇಯನ ಜನ್ಮ ದಿನವನ್ನು ಜಗತ್ತಿನೆಲ್ಲೆಡೆ ಹನುಮಾನ್ ಜಯಂತಿಯೆಂದು ಆಚರಿಸಲಾಗುತ್ತದೆ. ಈ ಬಾರಿಯೂ ಆಂಜನೇಯ ಜಯಂತಿ ಇಂದು ಆಚರಿಸುತ್ತಿದ್ದಾರೆ,
    ಪಂಚಾಂಗದ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಹನುಮ ಹುಟ್ಟಿದ್ದು. ಈ ಬಾರಿ ಹನುಮಾನ್ ಜಯಂತಿಯು ಹುಣ್ಣಿಮೆಯ ದಿನ ಬಂದಿದೆ.ಈ ದಿನ ಆಂಜನೇಯ ಭಕ್ತರು ಉಪವಾಸ ಆಚರಿಸಿ, ಮನೆಯಲ್ಲೂ ಪೂಜೆ ನೆರವೇರಿಸಿ ಹನುಮಂತನ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
    ವಿಶೇಷ
    ಏಕ ಪತ್ನಿ ವ್ರತಸ್ಥ ಶ್ರೀರಾಮಚಂದ್ರನ ಪರಮ ಭಕ್ತನಾಗಿರುವ ಹನುಮಂತನು ಅವತಾರ ತಾಳಿದ ದಿನವನ್ನು ಹನುಮ ಜಯಂತಿ ಎಂದು ಆಚರಿಸಲಾಗುತ್ತದೆ. ಚೈತ್ರ ಮಾಸದಲ್ಲಿ ಬರುವ ಈ ಹನುಮ ಜಯಂತಿಯನ್ನು ಭಾರತದಲ್ಲಿ ವಿಶಿಷ್ಟ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ.
    ಹನುಮನು ಹಿಂದೂ ಧರ್ಮಗ್ರಂಥಗಳಲ್ಲಿ ಪೂಜಿಸುವ ದೈವವಾಗಿದ್ದು, ಭಾರತದ ಮಹಾಕಾವ್ಯ ಎಂದೇ ಹೇಳಲಾಗುವ ರಾಮಾಯಣದಲ್ಲಿ ಪ್ರಮುಖ ಪಾತ್ರಗಳಲ್ಲೊಬ್ಬನಾಗಿದ್ದಾನೆ. ವಾಯುಪುತ್ರ, ಕಪಿವೀರ, ರಾಮಭಕ್ತ, ಮಾರುತಿ, ಸುಂದರ, ಅಂಜನಾತನಯ, ಆಂಜನೇಯ, ವಾನರ ಶ್ರೇಷ್ಠ, ಕೇಸರಿ ನಂದನ, ಹನುಮಂತ, ಕೇಸರಿ ನಂದನ ಎಂಬ ನಾನಾ ಹೆಸರಿನಲ್ಲಿ ಕರೆಯಲ್ಪಡುವ ಈ ಹನುಮನ ಉಲ್ಲೇಖ ವೈದಿಕ ಸಾಹಿತ್ಯದಲ್ಲೇ ಲಭಿಸುತ್ತದೆ. ಪುರಾಣಗಳಲ್ಲಿ ಅವನು ಕೇಸರಿಯೆಂಬ ವಾನರ ರಾಜನ ಮಡದಿ ಅಂಜನಾದೇಯೆಂಬ ಅಪ್ಸರೆಯಲ್ಲಿ ವಾಯುನ ಅಂಶದಿಂದ ಜನ್ಮ ತಾಳಿದನೆಂದು ಹೇಳಲಾಗಿದೆ.
    ಅಂಜನಾ ದೇವಿಯು ಪುಂಜಿಕಸ್ಥಲೆಯೆಂಬ ಅಪ್ಸರೆಯಾಗಿದ್ದಳು. ಹನುಮಂತನ ಕಲ್ಪನೆಯಲ್ಲಿ ಹಾಸುಹೊಕ್ಕಾಗಿರುವ ವಿವರಗಳು ವೇದವಾಙ್ಮಯದಲ್ಲಿ ಹಲವಾರಿವೆ. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಹನುಮಂತನ ಸ್ವಾರಸ್ಯ ಇಮ್ಮಡಿಸುತ್ತದೆ. ಮಗುವಾಗಿದ್ದಾಗ ಸೂರ್ಯನನ್ನು ಹಿಡಿದು ಬಾಯೊಳಗೆ ಅಡಗಿಸಿಕೊಂಡನೆಂದು ಕತ್ತಲೆ ಉಂಟಾಯಿತು. ಇಂದ್ರನಿಗೆ ರೋಷ ಬಂದು ಅವನ ವಜ್ರಾಯುಧದ ಪ್ರಹಾರದಿಂದ ಹನು (ದವಡೆ) ದೊಡ್ಡದಾಯಿತು. ಹೀಗಾಗಿ ಅವನಿಗೆ ಹನುಮಂತ ಎಂಬ ಹೆಸರು ಬಂತು. ಆಚಾರ್ಯ ಮಧ್ವರ ಒಕ್ಕಣೆಯಂತೆ ಹನುಮನೆಂದರೆ ಜ್ಞಾನ ಅಂದರೆ ಬುದ್ಧಿಮತಾಂ ವರಿಷ್ಠ, ಪೂರ್ಣಪ್ರಜ್ಞ.
    ಹನುಮ ದೇವರ ಸ್ಮರಣೆ ಎಲ್ಲಿರಲ್ಲೂ ಒಂದು ವಿಶೇಷ ಶಕ್ತಿಯನ್ನು ತುಂಬುತ್ತದೆ. ರಾಮದೂತನನ್ನು ನೆನೆಯುವ ದಿನವೇ ಹನುಮ ಜಯಂತಿಯಾಗಿದ್ದು, ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಹನುಮನಿಗೆ ಅನೇಕ ವಿಧವಾದ ಶಕ್ತಿಯಿರುವುದನ್ನು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು. ಭಾರತೀಯ ಶಾಸ್ತ್ರಗಳಲ್ಲೂ ಹನಮಂತನ ಸ್ಮರಣೆಯಿಂದಾಗುವ ಲಾಭಗಳ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ.
    ಆಚರಣೆಯ ಪೂಜಾ ವಿಧಾನ
    ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿವಾರದಂದು ಹನುಮಾನ್ ಪೂಜೆಗೆ ವಿಶೇಷ ಮಹತ್ವವಿದೆ. ಆಂಜನೇಯನನ್ನು ಮೆಚ್ಚಿಸಲು ಸುಲಭವಾದ ಮಾರ್ಗವೆಂದರೆ ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸುವುದು. ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಅದಕ್ಕೂ ಮುನ್ನ ಪೂಜೆ ಮಾಡುವ ವಿಧಾನ.
    ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಕೆಂಪು ಇಲ್ಲವೇ ಹಳದಿ ಬಟ್ಟೆಯನ್ನು ಧರಿಸಿ. ನಂತರ ಶಾಂತ ಮನಸ್ಸಿನಲ್ಲಿ ದೇವರ ಕೋಣೆಗೆ ಹೋಗಿ ನಮಸ್ಕರಿಸಿ. ಮೊದಲು ಗಣಪತಿಯನ್ನು ಸ್ಮರಿಸಿ. ಬಳಿಕ, ಹನುಮಂತನನ್ನು ಮೆಚ್ಚಿಸಲು ಈ ದಿನ ಸಾಸಿವೆ ಎಣ್ಣೆಯಿಂದ ನಾಲ್ಕು ಮುಖದ ದೀಪವನ್ನು ಹಚ್ಚಿ. ದೀಪ ಹಚ್ಚುವಾಗ ’ಓಂ ಶ್ರೀ ರಾಮದೂತ ಹನುಮತೇ ನಮಃ ದೀಪಂ ದರ್ಶಯಾಮಿ’ ಮಂತ್ರ ಹೇಳಿಕೊಳ್ಳಿ.
    ನಂತರ ಸಿಂಧೂರವನ್ನು ಅರ್ಪಿಸಿ. ಬಳಿಕ, ಸಾಸಿವೆ ಎಣ್ಣೆ, ತೆಂಗಿನಕಾಯಿ ಮತ್ತು ೨೧ ವೀಳ್ಯದೆಲೆಗಳಿರುವ ಹಾರವನ್ನು ಹನುಮನಿಗೆ ಅರ್ಪಿಸಿ. ಜೊತೆಗೆ, ದಾಸವಾಳ ಮತ್ತು ಗುಲಾಬಿ ಹೂಗಳನ್ನು ಅರ್ಪಿಸಿ.
    ಕಡೆಯಲ್ಲಿ ಲಡ್ಡು, ಬಾಳೆಹಣ್ಣು, ಪೇರಲೆ ಹಣ್ಣು ಇತ್ಯಾದಿಯನ್ನು ನೈವೇದ್ಯ ಮಾಡಿ.
    ಹನುಮಾನ್ ಚಾಲೀಸಾ ಮತ್ತ ಸುಂದರಕಾಂಡವನ್ನು ಪಠಿಸಿ. ರಾಮಧ್ಯಾನವನ್ನೂ ಮಾಡಿ ನಮಸ್ಕರಿಸಬೇಕು.
    ಆಚರಣೆಯ ಪ್ರಾಮುಖ್ಯತೆ
    ಹನುಮಾನ್ ಜಯಂತಿ ಭಾರತದಲ್ಲಿ ಒಂದು ಪ್ರಮುಖವಾದ ಹಬ್ಬವಾಗಿದೆ. ಈ ದಿನ ಶಕ್ತಿ, ಭಕ್ತಿ, ಬಲ ಹಾಗೂ ಬುದ್ದಿಯ ಸ್ವರೂಪವಾಗಿದೆ. ಭಗವಂತನಾದ ಆಂಜನೇಯ ಸ್ವಾಮಿಯ ಜನನ ದಿನವನ್ನು ಹನುಮಾನ್ ಜಯಂತಿ ಆಚರಿಸುತ್ತಾರೆ. ಆ ದಿನದಂದು ಭಕ್ತರು ಧಾರ್ಮಿಕ ಕಾರ್ಯಗಳನ್ನು ಶ್ರಧ್ದೆ ಭಕ್ತಿಯಿಂದ ಮಾಡುತ್ತಾರೆ. ರಾಮಾಯಣ, ಸುಂದರಪಾಠ ಇತ್ಯಾದಿಗಳನ್ನು ಜಪ ಮಾಡುತ್ತಾರೆ. ನಮ್ಮ ಹಿಂದೂ ಧರ್ಮದ ಪ್ರಾಚೀನ ಗ್ರಂಥಗಳಲ್ಲಿ ವರ್ಣಿಸಿರುವ ಪ್ರಕಾರ ಆಂಜನೇಯ ಸ್ವಾಮಿಯು ಶಿವನ ೧೧ನೇ ಅವತಾರ ಆಗಿದ್ದಾರೆ. ಇವರನ್ನು ಭಕ್ತಯಿಂದ ಪೂಜಿಸಿದರೆ ನಮ್ಮ ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳು ಹಾಗೂ ಸಮಸ್ಯೆಗಳನ್ನು ದೂರ ಮಾಡುತ್ತಾನೆ ಎನ್ನುವ ನಂಬಿಕೆಯಿದೆ.
    ವಿಷ್ಣುವು ರಾವಣನ ಸಂಹಾರಕ್ಕಾಗಿ ರಾಮಾವತಾರ ತಾಳಿದಾಗ, ಪರಶಿವನು ವಿಷ್ಣುವಿಗೆ ಸಹಾಯ ಮಾಡಲು ತಾನು ಆಂಜನೇಯ ಅವತಾರದಲ್ಲಿ ಭೂಮಿಗೆ ಬಂದನೆಂಬ ಪ್ರತೀತಿ ಇದೆ. ರಾವಣನು ಅಪಹರಿಸಿದ ಸೀತೆಯ ಹುಡುಕಾಟದಲ್ಲಿ ಆಂಜನೇಯ ಪಾತ್ರವೇ ದೊಡ್ಡದು. ರಾಮನ ಜಯದಲ್ಲಿ ಆಂಜನೇಯನ ಮಹತ್ವದ ಪಾತ್ರವಿದೆ. ಇನ್ನು ಚಿರಂಜೀವಿಯಾಗಿರುವ ಆಂಜನೇಯನು ಭಕ್ತರ ಕರೆಗೆ ಬೇಗ ಸ್ಪಂದಿಸುವವನು. ಹಾಗಾಗಿ ಹನುಮಾನ್ ಜಯಂತಿಯಂದು ಆಂಜನೇಯನ ಪೂಜೆಯಿಂದ ಆತನ ಆಶೀರ್ವಾದ ಗಳಿಸಿ, ಸಂಕಟಮೋಚನನೆಂದೇ ಹೆಸರಾಗಿರುವ ಆತನಿಂದ ಜೀವನದಲ್ಲಿ ಸಾಕಷ್ಟು ಸಮೃದ್ಧಿ ಕಾಣಬಹುದಾಗಿದೆ.