ಹುಣಿಸೆಹಣ್ಣಿನ ಉಪಯೋಗಗಳು

ಪ್ರತಿನಿತ್ಯ ಎಲ್ಲರ ಮನೆಗಳಲ್ಲೂ ಹುಣಿಸೆಹಣ್ಣನ್ನು ಕಡ್ಡಾಯವಾಗಿ ಬಳಕೆ ಮಾಡುತ್ತೇವೆ. ಇದರಲ್ಲಿರುವ ಹುಳಿರಸ ಅಡುಗೆಗೆ ಒಳ್ಳೆಯ ರುಚಿಯನ್ನು ಕೊಡುತ್ತದೆ. ಹುಳಿರಸ ಇರುವ ಅನೇಕ ಪದಾರ್ಥಗಳಿದ್ದಾಗ್ಯೂ ಹುಣಿಸೆಹಣ್ಣು ಪ್ರತಿನಿತ್ಯದಲ್ಲಿ ಬಳಕೆಯಾಗುತ್ತದೆ. ಅದನ್ನು ಶೇಖರಿಸಿಟ್ಟುಕೊಂಡು ವರ್ಷಪೂರ್ತಿ ಬಳಸಬಹುದಾಗಿದೆ. ಹುಣಿಸೆಹಣ್ಣು ಹಳೆಯದಾದಷ್ಟೂ ಆರೋಗ್ಯಕ್ಕೆ ಒಳ್ಳೆಯದು. ಹಳೆಯ ಹುಣಿಸೆಹಣ್ಣಿನಲ್ಲಿ ಸಿಹಿಅಂಶವಿದ್ದು, ಹೃದಯಕ್ಕೆ ಬಲಕೊಡುತ್ತದೆ. ಆದರೆ ಇದರ ಬಳಕೆ ಮಿತವಾಗಿರಬೇಕು. ಇದರಲ್ಲಿ ಕಬ್ಬಿಣ, ಸುಣ್ಣ, ಗಂಧಕ, ನಿಯಾಸಿನ್, ಫಾಸ್ಫರಸ್, ಮೆಗ್ನೀಷಿಯಂ, ತಾಮ್ರ ಸಿ ಜೀವಸತ್ವ ಅಡಗಿದೆ. ಇದರ ಕಾಯಿ, ಹಣ್ಣು, ಎಲೆ, ಬೀಜ ಎಲ್ಲವೂ ಔಷಧೀಯ ಗುಣಗಳಿಂದ ಕೂಡಿದೆ.
೧. ಉಷ್ಣದ ತಲೆನೋವು: ಸಣ್ಣನಿಂಬೆಗಾತ್ರದ ಹುಣಿಸೆಹಣ್ಣನ್ನು ನೀರಿನಲ್ಲಿ ನೆನೆಹಾಕಿ ಚೆನ್ನಾಗಿ ಕಿವುಚಿ ಶೋಧಿಸಿ, ಸಕ್ಕರೆ ಬೆರೆಸಿ ಕುಡಿಯುವುದರಿಂದ ತಲೆನೋವು ಕಡಿಮೆ ಆಗುತ್ತದೆ.
೨. ಕಣ್ಣು ಕೆಂಪಾಗುವಿಕೆ, ಕಣ್ಣಲ್ಲಿ ನೀರು ಸುರಿಯುವುದು: ಅತಿ ಉಷ್ಣದಿಂದ ಅಥವಾ ವಿಪರೀತವಾದ ಬಿಸಿಲಿನ ತಾಪದಿಂದ ಉಂಟಾಗುವ ಕಣ್ಣು ಕೆಂಪಾಗುವಿಕೆ, ಕಣ್ಣಲ್ಲಿ ನೀರು ಸುರಿಯುವುದು, ಈ ರೀತಿಯ ಸಮಸ್ಯೆಗಳಿಗೆ ಹುಣಿಸೆಹಣ್ಣನ್ನು ನೀರಿನಲ್ಲಿ ನೆನೆಹಾಕಿ ಕಿವುಚಿ, ಶೋಧಿಸಿ, ಅದಕ್ಕೆ ಕಲ್ಲುಸಕ್ಕರೆ ಹಾಕಿ, ೭ ದಿನಗಳ ಕಾಲ ಕುಡಿದರೆ ಕಡಿಮೆ ಆಗುತ್ತದೆ.
೩. ವಾಂತಿ, ಭೇದಿ, ಹೊಟ್ಟೆನೋವಿಗೆ: ಹುಣಿಸೆಹಣ್ಣು, ಪುದೀನಾ, ಮೆಣಸು, ಏಲಕ್ಕಿ, ಉಪ್ಪು ನುಣ್ಣಗೆ ಅರೆದು ಚಟ್ನಿಯ ರೀತಿ ಮಾಡಿಕೊಳ್ಳಿ. ಇದನ್ನು ಸೇವಿಸುವುದರಿಂದ ವಾಂತಿ, ಭೇದಿ ಹಾಗೂ ಹೊಟ್ಟೆನೋವು ಕಡಿಮೆ ಆಗುತ್ತದೆ.
೪. ಆಮಶಂಕೆ, ಅತಿಸಾರ: ಸಣ್ಣ ನಿಂಬೆಗಾತ್ರದಷ್ಟು ಹುಣಿಸೆಹಣ್ಣನ್ನು ಮಜ್ಜಿಗೆಯಲ್ಲಿ ನೆನೆಸಿ ಚೆನ್ನಾಗಿ ಕಿವುಚಿ, ಮತ್ತೆ ಸ್ವಲ್ಪ ಮಜ್ಜಿಗೆಯನ್ನು ಮಿಶ್ರಮಾಡಿ ದಿನಕ್ಕೆ ೨ – ೩ ಬಾರಿಕುಡಿದರೆ ಆಮಶಂಕೆ ಹಾಗೂ ಅತಿಸಾರ ಕಡಿಮೆ ಆಗುತ್ತದೆ.
೫. ಅರುಚಿ: ನಾಲಿಗೆ ರುಚಿಯನ್ನು ಕಳೆದುಕೊಂಡರೆ ಹುಣಿಸೆಹಣ್ಣಿನ ರಸ ೨ ಚಮಚ, ಸೈಂಧವ ಲವಣ, ಪುದೀನಾ, ಮೆಣಸು ಎಲ್ಲಾ ಸೇರಿಸಿ ಅಗಿದು ತಿಂದರೂ ಪರವಾಗಿಲ್ಲ ಅಥವಾ ನುಣ್ಣಗೆ ಅರೆದು ಸೇವಿಸಿದರೆ ನಾಲಿಗೆಗೆ ಒಳ್ಳೆಯ ರುಚಿಗ್ರಹಣ ಶಕ್ತಿ ಬರುತ್ತದೆ. ತಿಂದ ಆಹಾರ ಚೆನ್ನಾಗಿ ರುಚಿಸುತ್ತದೆ.
೬. ಕಣ್ಣು ಕತ್ತಲು ಕವಿಯುವುದನ್ನು ಸರಿಪಡಿಸಲು: ಹುಣಿಸೆಎಲೆ ಮತ್ತು ಬಿಳಿಮೆಣಸು ಸೇರಿಸಿ ಅರೆದು ಲೇಪಿಸಿದರೆ ಅನುಕೂಲವಾಗುತ್ತದೆ.
೭. ಕೆಮ್ಮಿಗೆ : ಎಲ್ಲಾ ರೀತಿಯ ಕೆಮ್ಮುಗಳಿಗೆ ೧ ಹಿಡಿಯಷ್ಟು ಹುಣಿಸೆ ಎಲೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆರಿದ ನಂತರ ಚೆನ್ನಾಗಿ ಕಿವುಚಿ ಶೋಧಿಸಿ. ಅದಕ್ಕೆ ಸೈಂಧವ ಲವಣ, ಹುರಿದ ಇಂಗು ಸೇರಿಸಿ ಕುಡಿಯಬೇಕು. ಯಾವುದೇ ರೀತಿಯ ಕೆಮ್ಮು ಬಂದಿದ್ದರೂ ಕಡಿಮೆ ಆಗುತ್ತದೆ.
೮. ಹುಳಕಡ್ಡಿ, ಗಜಕರ್ಣಕ್ಕೆ: ಹುಣಿಸೆಹಣ್ಣಿನ ಬೀಜವನ್ನು ನಿಂಬೆರಸದಲ್ಲಿ ತೇಯ್ದು ಆ ಜಾಗಕ್ಕೆ ಹಚ್ಚಿದಾಗ ಚರ್ಮದ ಸಮಸ್ಯೆಗಳಿಗೆ ಒಳ್ಳೆಯ ಪರಿಹಾರ.
೯. ಸುಟ್ಟಗಾಯಕ್ಕೆ: ಹುಣಿಸೆಮರದ ಚಕ್ಕೆಯನ್ನು ಸುಟ್ಟು ಬೂದಿಮಾಡಿ, ಆ ಬೂದಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಹಚ್ಚಿದರೆ ಸುಟ್ಟಗಾಯವು ಮಾಯವಾಗುತ್ತದೆ.
೧೦. ಹುಣಸೆ ಷರಬತ್ತು: ಹುಣಿಸೆಹಣ್ಣನ್ನು ನೀರಿನಲ್ಲಿ ನೆನೆಹಾಕಿ ಕಿವುಚಿ ರಸ ತೆಗೆದು ಆ ರಸವನ್ನು ಒಲೆಯ ಮೇಲಿಡಿ. ಅದು ಕುದಿಯುವಾಗ ಸಮಪ್ರಮಾಣದ ಸಕ್ಕರೆಯನ್ನು ಬೆರೆಸಿ ಕಲಕುತ್ತಿರಿ. ಪಾಕ ಬಂದಾಗ ಒಲೆ ಆರಿಸಿ, ಆರಿದ ನಂತರ ಗಾಜಿನ ಶೀಷೆಗೆ ತುಂಬಿಟ್ಟುಕೊಳ್ಳಿ. ಈ ಷರಬತ್ತನ್ನು ಸೇವಿಸುವುದರಿಂದ ಹೊಟ್ಟೆತೊಳೆಸುವಿಕೆ, ಹೃದಯದ ದೌರ್ಬಲ್ಯ, ಮೂಗಿನಿಂದ ಉಂಟಾಗುವ ರಕ್ತಸ್ರಾವ ಎಲ್ಲಕ್ಕೂ ಪರಿಹಾರವಾಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧