ಹುಣಿಸೆಕಾಯಿ ಹಿಂಡಿ ಎಂಬ ಅವಧಿ ಮುಗಿಯದ ರುಚಿ

ಕಲಬುರಗಿ,ಜ 18: ನಮ್ಮ ದೇಶದಲ್ಲಿರುವಷ್ಟು ಆಹಾರದ ವೈವಿಧ್ಯ ಮತ್ಯಾವ ದೇಶದಲ್ಲಿ ಇರಲಿಕ್ಕಿಲ್ಲ.ನಮ್ಮ ನಾಲಗೆಯಲ್ಲಿರುವ ರುಚಿ ಬುಗ್ಗೆಗಳಿಂತ ಹೆಚ್ಚಾಗಿ ಆಹಾರ ವೈವಿಧ್ಯ ನಮ್ಮ ಸಂಸ್ಕøತಿಯಲ್ಲಿದೆ.ಎಲ್ಲ ಆಹಾರ ಪದಾರ್ಥಗಳ ದಾಖಲೀಕರಣ ಆದದ್ದೇ ಆದರೆ ಅದು ಗಿನ್ನಿಸ್ ದಾಖಲೆಯಾಗುತ್ತದೆ.ನಮ್ಮ ಹಿರಿಯರು ಕಲೆ,ವಾಸ್ತುಶಿಲ್ಪ,ಸಾಹಿತ್ಯ,ಸಂಗೀತದಲ್ಲಷ್ಟೆ ತಮ್ಮ ಜಾಣತನವನ್ನು ತೋರಲಿಲ್ಲ.ಬದಲಾಗಿ ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಒಂದಾದ ಆಹಾರ ಅದರಲ್ಲೂ ಸಮತೋಲಿತ ಆಹಾರದಲ್ಲೂ ನಮ್ಮ ಪೂರ್ವಜರು ವೈಜ್ಞಾನಿಕತೆಯನ್ನು ಮೆರೆದಿದ್ದಾರೆ.
ಊಟದ ಜೊತೆಗೆ ಬಾಯಿಗೆ ರುಚಿಯಾದ ದೇಹಕ್ಕೆ ಹಿತವಾದ ಅನೇಕ ವ್ಯಂಜನಗಳನ್ನು ನಮ್ಮ ಹಿರಿಯರು ನಮಗೆ ನೀಡಿದ್ದಾರೆ.ಅವುಗಳಲ್ಲಿ ಒಂದು ಈ ಹುಣಿಸೆಕಾಯಿ ಹಿಂಡಿ ಅರ್ಥಾತ್ ತೊಕ್ಕು.ವಿಟಮಿನ್ ಸಿ ಯಿಂದ ಸಮೃದ್ಧವಾದ ಔಷಧೀಯಗುಣವುಳ್ಳ ಹುಳಿ ವ್ಯಂಜನವಿದು.ನಮ್ಮ ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಅದರಲ್ಲೂ ರೈತರ ಮನೆಗಳಲ್ಲಿ ಇದು ಇದ್ದೇ ಇರುತ್ತದೆ.ಖಡಕ್ ರೊಟ್ಟಿಯೊಂದಿಗೆ ಹನಿ ಮೊಸರು ಹರವಿಕೊಂಡು ಅದರಲ್ಲಿ ಈ ಹುಣಿಸೆಕಾಯಿ ಹಿಂಡಿ ಸ್ವಲ್ಪವೇ ಸ್ವಲ್ಪ ಹಾಕೊಂಡು ಉಣ್ಣಲು ಕುಂತರೆ ರೊಟ್ಟಿ ಬುಟ್ಟಿಯೇ ಖಾಲಿ.ಇದರ ತಯಾರಿಕೆಯಲ್ಲಿ ಹೆಣ್ಣು ಮಕ್ಕಳ ಶ್ರಮ ಬಹಳಷ್ಟಿದೆ.
ಹುಣಿಸೆಕಾಯಿ,ಕೆಂಪು ಮೆಣಸಿನಕಾಯಿ,ಮೆಂತೆ,ಅರಿಶಿನ ಕೊಂಬು ಒಂದಿಡೀ ದಿನ ನೀರಿನಲ್ಲಿ ನೆನಸಿಟ್ಟು ಮರುದಿನ ಒರಳಿನಲ್ಲಿ ರುಬ್ಬಿಕೊಳ್ಳುತ್ತಾರೆ.ಅದಕ್ಕೆ ಜೀರಗಿ,ಇಂಗು,ಬೆಳ್ಳುಳ್ಳಿ ಪೇಸ್ಟ್ ,ಉಪ್ಪು,ಒಳ್ಳೆಣ್ಣೆಯನ್ನು ಹದವಾಗಿ ಮಿಶ್ರ ಮಾಡುತ್ತಾರೆ.ನಂತರ ಇಡೀ ಮಿಶ್ರಣವನ್ನು ಚೆನ್ನಾಗಿ ಕಲಿಸಿ ಮಣ್ಣಿನ ಮಡಿಕೆ ಅಥವಾ ಪಿಂಗಾಣಿ ಪಾತ್ರೆಯಲ್ಲಿ ಸಂಗ್ರಹಿಸಿಡಲಾಗುತ್ತದೆ.ಹೀಗೆ ಸಂಗ್ರಹಿಸಿಟ್ಟ ಹುಂಚಿಕಾಯಿ ಹಿಂಡಿಗೆ ಎಕ್ಸ್ ಪೈರ್ ಡೇಟ್ ಎಂಬುದೇ ಇರೋದಿಲ್ಲ.ಒಂದು ವರ್ಷ,ಎರಡು ವರ್ಷ.. ಊಹೂಂ! ವರ್ಷದಿಂದ ವರ್ಷಕ್ಕೆ ರುಚಿ ಹೆಚ್ಚಾಗುತ್ತಲೇ ಇರುತ್ತದೆ.ಈಗಿನ ಆಧುನಿಕ ಜೀವನದಲ್ಲಿ ಅನೇಕ ಬೇರೆ ರೀತಿಯ ಆಹಾರಗಳು ನಮ್ಮ ಮನೆ ಮನ ಸೇರಿವೆ.ಇವುಗಳಿಂದ ಬಾಯಿಗಷ್ಟೆ ರುಚಿಯಿದೆ. ದೇಹಕ್ಕೆ ಯಾವುದೇ ಉಪಯೋಗ ಸಿಗುತ್ತಿಲ್ಲ.ಇವು ಕಾಲಾಂತರದಲ್ಲಿ ದೇಹವನ್ನು ಅಡ್ಡ ಪರಿಣಾಮಗಳ ಅಡ್ಡೆಯಾಗಿಸಿ ಖಾಯಿಲೆಗಳ ಖಾಯಂ ನೆಲೆಯಾಗಿಸುತ್ತಿವೆ.ನಮ್ಮ ಹಿರಿಯರು ಆಹಾರವನ್ನೇ ಔಷಧಿಯನ್ನಾಗಿಸಿದವರು.ನಮ್ಮ ಮುಂದಿನ ಪೀಳಿಗೆ ಈ ಅದ್ಭುತವಾದ ರುಚಿಯ ರಸಾಯನವನ್ನು ಕಳೆದುಕೊಂಡ ನತದೃಷ್ಟರಾಗದಿರಲಿ ಎಂಬುದೊಂದು ನಮ್ಮ ಕಳಕಳಿ
ಪ್ರಶಾಂತ ಎಂ ಕುನ್ನೂರ.