ಹುಡೇo ಗ್ರಾಮದಲ್ಲಿ ಡಿಸಿ ಗ್ರಾಮವಾಸ್ತವ್ಯ.  ಕೆರೆ ನಿರ್ಮಾಣ ಸೇರಿದಂತೆ ಇತರೆ ಬೇಡಿಕೆ ಇಟ್ಟ ಗ್ರಾಮಸ್ಥರು. ಪೋಡಿ ವಿಳಂಬ,  ಪ್ರ.ದ.ಸ. ಸಸ್ಪೆoಡ್ ಗೆ ಡಿಸಿ ಆದೇಶ. 

ಕೂಡ್ಲಿಗಿ. ನ. 19 :- ತಾಲೂಕಿನ ಗಡಿಗ್ರಾಮವಾದ ಹುಡೇo ಗ್ರಾಮಪಂಚಾಯಿತಿಯಲ್ಲಿ ಇಂದು ವಿಜಯನಗರ ನೂತನ ಜಿಲ್ಲಾಧಿಕಾರಿ ಟಿ ವೆಂಕಟೇಶ ಮೊದಲ ಗ್ರಾಮವಾಸ್ತವ್ಯ ನಡೆಸಿದರು. 

ಸರ್ಕಾರದ ಯೋಜನೆ ಜನರ ಮನೆಬಾಗಿಲಿಗೆ ಎನ್ನುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಪ್ರತಿ ತಿಂಗಳ ಮೂರನೇ ಶನಿವಾರ ನಡೆಸಲಾಗುತ್ತಿದ್ದು ಇಂದು ನಡೆದ ಹುಡೇo ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿ ದಲಿತ ಕಾಲೋನಿಗಳಿಗೆ ಭೇಟಿ ಅಲ್ಲಿನ ಜನರ ಅಹವಾಲು ಸ್ವೀಕರಿಸಿ ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟನೆ ನೆರವೇರಿದರು. 

ನಂತರ ಜನರ ಸಮಸ್ಯೆ ಅಹವಾಲು ಸ್ವೀಕರಿಸುವಾಗ ಹುಲಿಕೆರೆ ಗ್ರಾಮದ ನಾಗರಾಜ ಎಂಬುವವರು ತಿಳಿಸಿದಂತೆ ಸ. ನಂ. 341ರ ಕುರಿತಂತೆ 1ರಿಂದ 5 ರವರೆಗೆ ಪೋಡಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿ 10 ತಿಂಗಳು ಗತಿಸಿದರೂ ಅದನ್ನು ಮಾಡಿಕೊಡದೆ ಪ್ರಥಮ ದರ್ಜೆ ಸಹಾಯಕರಾದ ರಂಗನಾಥ ದೊಡ್ಮನಿ ವಿಳಂಬ ಮಾಡುತ್ತಿದ್ದಾರೆ ಎಂದಾಗ  ಜಿಲ್ಲಾಧಿಕಾರಿ ವೆಂಕಟೇಶ ತಕ್ಷಣ ಫೋನಾಯಿಸಿ ತಕ್ಷಣದಿಂದ ಆತನನ್ನು ಅಮಾನತು ಮಾಡುವಂತೆ ಸಂಬಂದಿಸಿದ ಅಧಿಕಾರಿಗೆ ಆದೇಶಿಸಿದರು. 

ಗ್ರಾಮಸ್ಥರ ಮನವಿ :- ಹುಡೇo ತಾಲೂಕು ಪಂಚಾಯತಿ ಮಾಜಿ ಸದಸ್ಯ ಪಾಪನಾಯಕ, ಪತ್ರಕರ್ತ ಹುಡೇo ಕೃಷ್ಣಮೂರ್ತಿ ಸೇರಿದಂತೆ ಗ್ರಾಮಪಂಚಾಯಿತಿ ಸದಸ್ಯರು ಸೇರಿ ಗಡಿಭಾಗದ ಗ್ರಾಮಕ್ಕೆ ಒಂದು ನೂತನ ಕೆರೆನಿರ್ಮಿಸಿಕೊಡಬೇಕು, ಹುಡೇo – ಜುಮ್ಮೋಬನಹಳ್ಳಿ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಅಡ್ಡಿಯಾಗಿದ್ದು ಅದನ್ನು ಸರಿಪಡಿಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು, ಈ ಹಿಂದೆ ಜನರಿಗೆ ಅನುಕೂಲವಾಗಿದ್ದ ಕುಮತಿ ಬಸ್ಸು ನಿಂತಿದ್ದು ಮತ್ತೊಮ್ಮೆ ಓಡಿಸಬೇಕು, ಕಾನಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಈ ಭಾಗಕ್ಕೆ ಉಪಠಾಣೆ ನಿರ್ಮಿಸಬೇಕು, ಗಡಿಭಾಗದ ಜನರ ಆರೋಗ್ಯ ಹಿತದೃಷ್ಠಿಯಿಂದ ಆಸ್ಪತ್ರೆಗೆ ಒಂದು ಅಂಬ್ಯುಲೆನ್ಸ್ ವ್ಯವಸ್ಥೆ ಹಾಗೂ ವೈದ್ಯಾಧಿಕಾರಿಗಳ ನೇಮಕಕ್ಕೆ ಮುಂದಾಗಬೇಕು ಎಂಬಿತ್ಯಾದಿ ಬೇಡಿಕೆ ಕುರಿತಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ವೆಂಕಟೇಶ ಅವರಿಗೆ ಮನವಿ ಅರ್ಜಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಹುಡೇo ಗ್ರಾಮಪಂಚಾಯಿತಿ ಅಧ್ಯಕ್ಷೆ ಕರಿಬಸಮ್ಮ, ಉಪಾಧ್ಯಕ್ಷ ರಾಘವೇಂದ್ರ,  ಹೊಸಪೇಟೆ ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ಡಿಹೆಚ್ ಓ ಸಲೀಮ್, ಡಿಡಿಪಿಐ ಕೊಟ್ರೇಶ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

ಇಓ ರವಿಕುಮಾರ  ಸ್ವಾಗತಿಸಿದರು, ತಹಸೀಲ್ದಾರ್ ಜಗದೀಶ ಪ್ರಾಸ್ತಾವಿಕವಾಗಿ ಮಾತನಾಡಿದರು ತಳವಾರ್ ಶರಣಪ್ಪ ನಿರೂಪಿಸಿ ವಂದಿಸಿದರು. ನೂರಾರು ಜನರು ಈ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಹಾಜರಿದ್ದು ಅರ್ಜಿ ಸಲ್ಲಿಸಿದರು. 

ಸಿಡಿಪಿಒ ಇಲಾಖೆ ಸೇರಿದಂತೆ ಇತರೆ ಇಲಾಖೆಯಿಂದ ಪೋಷಕ್ ಅಭಿಯಾನ ಮೇಳ , ರಕ್ತದಾನ ಶಿಬಿರ ನಡೆಸಲಾಗಿತ್ತು.