ಹುಡೇಂ ಗ್ರಾಪಂಗೆ ರಾಮಚಂದ್ರಪ್ಪ ಅಧ್ಯಕ್ಷ , ಪ್ಯಾರಿಮಾಬೀ ಉಪಾಧ್ಯಕ್ಷೆ ಯಾಗಿ ಆಯ್ಕೆ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 28 : – ತಾಲೂಕಿನ ಹುಡೇಂ ಗ್ರಾಮ ಪಂಚಾಯಿತಿಯ 2 ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ರಾಮಚಂದ್ರಪ್ಪ ಅಧ್ಯಕ್ಷರಾಗಿ ಸದಸ್ಯರು ಮತ ಚಲಾಯಿಸುವ ಮೂಲಕ ಚುನಾಯಿತರಾದರೆ, ಉಪಾಧ್ಯಕ್ಷರಾಗಿ ಪ್ಯಾರಿಮಾಬೀ ಗನಿಸಾಬ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಗ್ರಾಮಪಂಚಾಯಿತಿ ಚುನಾವಣಾಧಿಕಾರಿ ಹಾಗೂ ಕೂಡ್ಲಿಗಿ ಸಿಡಿಪಿಒ ನಾಗನಗೌಡ ಪಾಟೀಲ್ ಘೋಷಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಪಂಗಡ ಮೀಸಲು ಹೊಂದಿದ್ದ ಅಧ್ಯಕ್ಷ ಸ್ಥಾನಕ್ಕೆ ಸದಸ್ಯರಾದ ರಾಮಚಂದ್ರಪ್ಪ ಮತ್ತು ಜೊಳ್ಳಜ್ಜರ ಪಾಲಯ್ಯ ನಾಮಪತ್ರ ಸಲ್ಲಿಸಿದ್ದರು. ಒಟ್ಟು 19 ಸದಸ್ಯರ ಪೈಕಿ ಇಬ್ಬರು ಉಮೇದುವಾರಿಕೆಯಲ್ಲಿದ್ದರು.19ಸದಸ್ಯರಲ್ಲಿ ಒಟ್ಟು ಆರು ಮತಗಳ ಗುರುತು ಹಾಕುವಲ್ಲಿ ಕ್ರಮಬದ್ಧತೆ ಇಲ್ಲದ್ದರಿಂದ ಆರು  ಮತಗಳು ಕ್ರಮಬದ್ಧವಾಗಿಲ್ಲವೆಂದು ಹೇಳುವ ಮೂಲಕ ಅಸಿಂಧು ಎಂದು ಘೋಷಿಸಲಾಯಿತು ಉಳಿದ 13ಸದಸ್ಯರ ಮತಗಳಲ್ಲಿ  ರಾಮಚಂದ್ರಪ್ಪ ಅವರಿಗೆ -7 ಮತ್ತು ಜೊಳ್ಳಜ್ಜರ ಪಾಲಯ್ಯ ಅವರಿಗೆ -6 ಮತಗಳು ಬಿದ್ದಿವೆ. ಹೀಗಾಗಿ, ರಾಮಚಂದ್ರಪ್ಪ ಅವರು ಅಧ್ಯಕ್ಷರಾಗಿ ಮತ್ತು ಸಾಮಾನ್ಯ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಪ್ಯಾರಿಮಾಬೀ ಗನಿಸಾಬ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಕೂಡ್ಲಿಗಿ  ಸಿಡಿಪಿಒ ನಾಗನಗೌಡ ಪಾಟೀಲ್ ಘೋಷಿಸಿದರು.
ಚುನಾವಣಾ ಸಹಾಯಕರಾಗಿ ಮಹಿಳಾ  ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಬಸವರಾಜ, ಪಾಲಾಕ್ಷಯ್ಯ, ಗ್ರಾಪಂ ಪಿಡಿಒ ಲಕ್ಷ್ಮಿಬಾಯಿ, ಕಾರ್ಯದರ್ಶಿ ಎಂ.ಟಿ.ತಿಪ್ಪೇರುದ್ರಪ್ಪ ಸೇರಿ ಇತರರಿದ್ದರು. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ರಾಮಚಂದ್ರಪ್ಪ ಹಾಗೂ ಉಪಾಧ್ಯಕ್ಷೆ ಪ್ಯಾರಿಮಾಬೀ ಗನಿಸಾಬ್ ಅವರನ್ನು ಸದಸ್ಯರು, ಮುಖಂಡರು ಅಭಿನಂದಿಸಿದರು.