ಹುಟ್ಟೂರಿಗೆ  ಮರಳಿದ ವೀರಯೋಧ – ಅದ್ದೂರಿ ಸ್ವಾಗತ


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.6 :- ಸತತ 20ವರ್ಷಗಳ ದೇಶ ಸೇವೆಯನ್ನು ದೇಶದ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಯಲ್ಲಿ ಸತತ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯ್ನಾಡಿಗೆ ಮರಳಿದ ವೀರಯೋಧ ರಾಘವೇಂದ್ರ ಅವರು ಹುಟ್ಟೂರಾದ ತಾಲೂಕಿನ ಆಲೂರು ಗ್ರಾಮದಲ್ಲಿ ಮಂಗಳವಾರ  ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಆಲೂರು ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಿಂದ ಗ್ರಾಮದವರೆಗೆ ವೀರಯೋಧ ರಾಘವೇಂದ್ರ ಸೇರಿ ಕುಟುಂಬದವರನ್ನು ಅಲಂಕೃತ ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಮಾಡಲಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ರಾಘವೇಂದ್ರ ರೆಡ್ಡಿ ಮಾತನಾಡಿ, ಗಡಿಯಲ್ಲಿ ಶತ್ರುಗಳಿಂದ ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸಿರುವುದು ನನಗೆ ಆತ್ಮತೃಪ್ತಿ ಇದೆ. ಮಕ್ಕಳಿಗೆ ಶಾಲಾ ಹಂತದಿಂದಲೂ ಭಾರತ ದೇಶದ ಹಿರಿಮೆ, ಗರಿಮೆಯನ್ನು ತಿಳಿಸಬೇಕು. ಆ ಮೂಲಕ ಮಕ್ಕಳಲ್ಲಿ ದೇಶ ನಮ್ಮದೆಂಬ ಭಾವನೆ ಮೂಡಲಿದೆ. ಹೆತ್ತ ತಾಯಿ, ತಂದೆಯವರಂತೆ ದೇಶದ ರಕ್ಷಣೆಯೂ ಎಲ್ಲಾ ಮಕ್ಕಳ ಮೇಲೆ ಇರಬೇಕಿದೆ ಎಂದರಲ್ಲದೆ, ಸೈನಿಕನಾಗಿ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ನನ್ನ ಮತ್ತು ಕುಟುಂಬವನ್ನು ಪ್ರೀತಿಯಿಂದ ಸ್ವಾಗತಿಸಿದ್ದು ಹೃದಯ ತುಂಬಿ ಬಂದಂತಾಗಿದೆ. ತಾಯಿ ಭಾರತಾಂಬೆ ಸೇವೆ ಸಲ್ಲಿಸಿದ್ದೇನೆ. ಇನ್ಮುಂದೆ ಹುಟ್ಟೂರಿನಲ್ಲಿ ಸೇವೆಯಲ್ಲಿ ಎಲ್ಲರ ಜತೆ ಇರುತ್ತೇನೆ ಎಂದು ಭಾವುಕರಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಕಿರಿಯರು, ಮಹಿಳೆಯರು ಸೇರಿ ಗ್ರಾಪಂ ಸದಸ್ಯರು ಇದ್ದರು.