ಹುಟ್ಟು ಹಬ್ಬಕ್ಕೆ ಶಾಲಾ ಮಕ್ಕಳಿಗೆ ನೋಟಬುಕ್ ವಿತರಿಸಿದ ಯುವಕ

ವಿಜಯಪುರ: ಫೆ.11:ಯುವಕನೊಬ್ಬ ತನ್ನ ಹುಟ್ಟು ಹಬ್ಬವನ್ನು ದುಂದು ವೆಚ್ಚ ಮಾಡಿ ಸಾವಿರಾರು ರೂಪಾಯಿ ವ್ಯಯ ಮಾಡದೆ ಅದೇ ಹಣದಿಂದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಶುಕ್ರವಾರ ನೋಟಬುಕ್ ಹಾಗೂ ಪೆನ್ನು ವಿತರಿಸಿ ವಿಶೇಷವಾಗಿ ತನ್ನ 21ನೇ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡು ಯುವ ಪೀಳಿಗೆಗೆ ಮಾದರಿಯಾಗಿದ್ದಾನೆ.
ಜಿಲ್ಲೆಯ ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಚಿನ ಹಣಮಂತ ಗದ್ಯಾಳ ಎಂಬ ಯುವಕ ಮೂರು ವರ್ಷದಿಂದ ಪ್ರತಿ ವರ್ಷ 50 ಸಾವಿರ ವೆಚ್ಚ ಮಾಡಿ ನೋಟಬುಕ್, ಪೆನ್ನು ಹಾಗೂ ಮಕ್ಕಳಿಗೆ ಸಿಹಿ ವಿತರಿಸಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದಾನೆ.
ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಲಿಕಾರವಸ್ತಿ ಹಾಗೂ ಉಪ್ಪಾರವಸ್ತಿ, ಹಿರಿಯ ಪ್ರಾಥಮಿಕ ಶಾಲೆ ಕಳ್ಳಕವಟಗಿ ಹಾಗೂ ತಾಂಡಾ ಶಾಲೆ, ಪ್ರೌಢ ಶಾಲೆ ಹಾಗೂ ಸಂಗಮನಾಥ ಕಿರಿಯ ಪ್ರಾಥಮಿಕ ಶಾಲೆಗಳ ಒಟ್ಟು ಐದನೂರಕ್ಕೂ ಹೆಚ್ಚು ಮಕ್ಕಳಿಗೆ ನೋಟಬುಕ್ ವಿತರಿಸಿ ಕಿರಿಯ ವಯಸ್ಸಿನಲ್ಲೆ ಶೈಕ್ಷಣಿಕ ಸೇವೆ ಮಾಡುತ್ತಿದ್ದಾನೆ.
ದುಂದು ವೆಚ್ಚ ಮಾಡಿ ಹುಟ್ಟು ಹಬ್ಬ ಆಚರಿಸಿಕೊಳ್ಳದೇ ಅದೇ ಹಣದಿಂದ ಬಡ ಮಕ್ಕಳಿಗೆ ಸಹಾಯ ಆಗಲಿ ಎಂಬ ಉದ್ದೇಶದಿಂದ ಸಮಾಜಕ್ಕೆ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ ಎಂದು ಯುವಕ ಸಚಿನ ಗದ್ಯಾಳ ತಿಳಿಸಿದರು.
ನೋಟಬುಕ್ ವಿತರಿಸಿ ಸರ್ಕಾರಿ ಶಾಲೆಯಲ್ಲಿನ ಮದ್ಯಾಹ್ನದ ಬಿಸಿ ಊಟ ಸವಿದ ಗೆಳೆಯರ ಬಳಗವು ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ನೀಡುತ್ತಾ ಶಾಲೆಯೂ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು. ಶಾಲಾ ಮಕ್ಕಳು ಖುಷಿಯಿಂದ ನೋಟಬುಕ್ ಹಿಡಿದುಕೊಂಡು ಹುಟ್ಟು ಹಬ್ಬದ ಶುಭಾಷಯ ತಿಳಿಸಿದರು.
ಈ ಸಂದರ್ಭದಲ್ಲಿ ಪರಮಾನಂದ ಕಣಮುಚನಾಳ, ಮಲ್ಲನಗೌಡ ಬಿರಾದಾರ, ರಾಜೇಂದ್ರ ಶಿರದವಾಡ, ಸಂತೋಷ ಗಿಡ್ನವರ, ನಾಗರಾಜ ಗದ್ಯಾಳ, ಶಿಕ್ಷಕರು ಹಾಗೂ ಮಕ್ಕಳು ಇದ್ದರು.