ಹುಟ್ಟು-ಸಾವುಗಳು ಬದುಕಿನ ಎರಡು ಕೊನೆಗಳುಸಾರ್ಥಕವಾಗಲಿ ಮಧ್ಯದ ಜೀವನ : ಪಪ್ಪಾ

ಕಲಬುರಗಿ,ಮಾ,13: ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ! ಹುಟ್ಟು-ಸಾವುಗಳು ಬದುಕಿನ ಎರಡು ಕೊನೆಗಳು. ಅದರ ಮಧ್ಯದಲ್ಲಿ ಇರುವ ಜೀವನ ಸಾರ್ಥಕವಾಗಬೇಕು ಎಂದು ಕರೆಕೊಟ್ಟವರು ಸಮಾಜ ಸೇವಕ, ವೀರಶೈವ ಸಮಾಜದ ಮುಖಂಡ, ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಶರಣು ಪಪ್ಪಾ.
ಅವರು ಭಾನುವಾರ ಸಂಜೆ ತಾಲೂಕಿನ ಸುಕ್ಷೇತ್ರ ಕಡಣಿ ಶ್ರೀ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಮಹಾದಾಸೋಹಿ ಶ್ರೀ ಶರಣಬಸವೇಶ್ವರ’ರ ಪುರಾಣ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿ ಚಾಲನೆ ನೀಡಿ ಮಾತನಾಡುತ್ತಾ, ಮಾನವ ಜನ್ಮ ಶ್ರೇಷ್ಠ. ಮಾನವರಾದವರು ಮನುಕುಲದ ಏಳ್ಗೆಗೆ ಶ್ರಮಿಸಬೇಕು. ಕನಿಷ್ಠ ನಮ್ಮ ಸುತ್ತವರ ಹಸಿವು ಹಿಂಗಿಸಬೇಕು, ಕಷ್ಟದಲ್ಲಿದ್ದವರಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು. 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಸಮಾನತೆ ಸಮಾಜಕ್ಕಾಗಿ ದುಡಿದವರು. ಜಾತಿ, ಧರ್ಮ, ಲಿಂಗಬೇಧವಿಲ್ಲದ ಸಮಾಜ ಕಟ್ಟಲು ಶ್ರಮಿಸಿದರು. 17ನೇ ಶತಮಾನದಲ್ಲಿ ಅರಳಗುಂಡಗಿಯಲ್ಲಿ ಅರಳಿದ ಕುಸುಮ, ಕಲ್ಯಾಣ ಕರ್ನಾಟಕದಲ್ಲಿ ದಾಸೋಹ ಪರಂಪರೆಯೇ ಹಮ್ಮಿಕೊಂಡು, ಮಹಾದಾಸೋಹಮೂರ್ತಿಯಾಗಿ ಜಗಬೆಳಗಿದವರು. ಇವತ್ತು, 21ನೇ ಶತಮಾನದಲ್ಲಿ ವೈಜ್ಞಾನಿಕ ಯುಗದಲ್ಲಿದ್ದರೂ, ಜಾತಿ, ಧರ್ಮ ವ್ಯವಸ್ಥೆ ಇನ್ನೂ ಜಟಿಲವಾಗಿದ್ದಿರುವುದು ವಿಷಾದ ಸಂಗತಿ. ಜಾತಿ ಜೋತು ಬೀಳದೇ, ಮಾನವ ಧರ್ಮದ ಏಳ್ಗೆಗೆ ದುಡಿಯಬೇಕಾದ ಅಗತ್ಯವಾಗಿದೆ ಎಂದು ನುಡಿದರು. ಸರ್ವ ಜನಾಂಗದ ತೋಟವಾಗಬೇಕಾದರೆ, ಪುರಾಣ ಸಂಸ್ಕøತಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಬದುಕಿನಲ್ಲಿ ಪರಿವರ್ತನೆ ಕಾಣಬೇಕು ಎಂದು ಸಲಹೆ ನೀಡಿದರು. ಸುಕ್ಷೇತ್ರ ಚಿನ್ಮಯಗಿರಿಯ ಮಹಾತಪಸ್ವಿ ಶ್ರೀ ಗುರು ಮಹಾಂತೇಶ್ವರ ಮಠದ ನೂತನ ಪೀಠಾಧಿಪತಿ ಪೂಜ್ಯಶ್ರೀ ಷ.ಬ್ರ. ವೀರಮಹಾಂತೇಶ್ವರ ಶಿವಾಚಾರ್ಯರ ಸಿರಿಕಂಠದಲ್ಲಿಮಹಾದಾಸೋಹಿ ಶ್ರೀ ಶರಣಬಸವೇಶ್ವರ’ರ ಪುರಾಣವನ್ನು ಪ್ರಾರಂಭಿಸಿದರು. ಗ್ರಾಮದ ಹಿರಿಯರಾದ ಚಂದ್ರಶ್ಯಾ ಅಗಸರ ಬಸವಣ್ಣನ ಪಾರ ನಿರ್ವಹಿಸಿದರು.ಶ್ರೀ ಗುರುದೇವ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಂತೋಷ ಗುಡಿಮನಿಯವರು ಮಾತನಾಡಿದರು. ಅಧ್ಯಕ್ಷತೆ ಕಡಣಿ ಗ್ರಾ.ಪಂ. ಅಧ್ಯಕ್ಷರಾದ ಗಜಾನಂದ ಬಿ. ಬಿರಾಜದಾರ ಹಿಸಿದ್ದರು. ವೇದಿಕೆ ಮೇಲೆ ನಿಕಟಪೂರ್ವ ಅಧ್ಯಕ್ಷ ಗಿರೆಪ್ಪಗೌಡ ಕೆ. ಮಾಲಿಪಾಟೀಲ, ಸದಸ್ಯರುಗಳಾದ ಚನ್ನಬಸಪ್ಪ ಎಸ್. ಚನ್ನಪ್ಪಗೋಳ, ಮಿಣಜಗಿ ವಿ.ಎಸ್.ಎಸ್.ಎನ್. ಅಧ್ಯಕ್ಷ ದಯಾನಂದ ಎಕಲೂರು, ನಿರ್ದೇಶಕರುಗಳಾದ ಕರಬಸಪ್ಪ ಎಸ್., ರವಿ ಬಿ. ಶಿವಕಾಂತಮ್ಮ ಕೆ. ಮಾಲಿಪಾಟೀಲ, ಕಾರ್ಯದರ್ಶಿ ಶಿವರುದ್ರ ಕರೇಕಲ್, ಪತ್ರಕರ್ತ ಅಂಬಾರಾಯ ಕೋಣೆ, ಬಾಲಕೃಷ್ಣ ಪವಾರ, ಉದ್ಯಮಿ ವಿನಾಯಕ, ಅನೀಲಕುಮಾರ, ಕಪಿಲ ಜಾನೆ, ಆನಂದ ಜೋಗದ್, ಗಣ್ಯರಾದ ರಾಜು ಎನ್. ಕೆರಂಬಗಿ, ಸಿದ್ದಯ್ಯಸ್ವಾಮಿ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಿದ್ದಯ್ಯಸ್ವಾಮಿ ಜಿ. ಹಿರೇಮಠ ಅವರು ಮಹಾಪುರಾಣ ಗ್ರಂಥಕ್ಕೆ ಪೂಜೆ ಸಲ್ಲಿಸಿದ್ದರು. ದೇವಿಂದ್ರಪ್ಪ ಎಕಲೂರ ಕಾರ್ಯಕ್ರಮ ನಿರೂಪಿಸಿದರು. ಅಪಾರ ಸಂಖ್ಯೆಯಲ್ಲಿ ಸದ್ಭಕ್ತಾಧಿಗಳು ಭಾಗವಹಿಸಿದ್ದರು.


ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾನು, ಶ್ರೀ ಶಂಕರಲಿಂಗೇಶ್ವರರ ಜಾತ್ರೆ ನಿಮಿತ್ತ ಗ್ರಾಮದಲ್ಲಿ ಆರೋಗ್ಯ ಶಿಬಿರ, ನೇತ್ರ ದಾನ ಶಿಬಿರ ಹಮ್ಮಿಕೊಂಡು ಸರ್ವರಿಗೂ ಆರೋಗ್ಯ ಭಾಗ್ಯ ನೀಡೋಣ. ನನ್ನೊಂದಿ ವೈದ್ಯಕೀಯ ಕ್ಷೇತ್ರದ ಗಣ್ಯಾತಿ ಗಣ್ಯರು ಜೊತೆಗಿದ್ದಾರೆ. ಅವರೆಲ್ಲರನ್ನೂ ಬಳಸಿಕೊಂಡು ಸದ್ವಿನಿಯೋಗ ಮಾಡಿಕೊಳ್ಳೋಣ. ರಕ್ತದಾನ ಶಿಬಿರ ಕೂಡ ಹಮ್ಮಿಕೊಂಡು ರಕ್ತ ಸಂಗ್ರಹ ಮಾಡಿ ಅಗತ್ಯವಿದ್ದವರಿಗೆ ನೆರವಾಗೋಣ. ಇದಕ್ಕಾಗಿ ಬೇಕಾಗುವ ಅಗತ್ಯ ಔಷಧೋಪಚಾರಗಳನ್ನು ಒದಗಿಸುತ್ತೇನೆ.
-ಶರಣು ಪಪ್ಪಾ ಹೆಚ್.ಕೆ.ಸಿ.ಸಿ. ಕಾರ್ಯದರ್ಶಿ ಕಲಬುರಗಿ


ಸಂಸಾರಿಗಳಿಗೆ ಶ್ರೀ ಶರಣಬಸವೇಶ್ವರರ ಪುರಾಣ ತುಂಬಾ ಅಗತ್ಯವಾಗಿದೆ. ಸಂಸಾರದಲ್ಲಿದ್ದುಕೊಂಡೂ, ಪಾರಮಾರ್ಥದತ್ತ ಸಾಗುವುದು ಹೇಗೆ ಎಂಬುದು ಶ್ರೀ ಶರಣಬಸವೇಶ್ವರರ ಬದುಕು ಮಾರ್ಗದರ್ಶನ ನೀಡಲಿದೆ. ಕಲ್ಯಾಣ ಕರ್ನಾಟಕದಲ್ಲಿ ದಾಸೋಹ ಪರಂಪರೆಯೇ ಹಾಕಿ ನಾಡಿಗೆ ಆದರ್ಶ ಬದುಕು ತೋರಿಸಿಕೊಟ್ಟಿದ್ದಾರೆ. ಅವರು ಬದುಕು ಅನುಕರಣೀಯವಾಗಿದೆ. ದಾಸೋಹದ ಮೂಲಕ ಕಲಬುರಗಿಯಲ್ಲಿ ದಾಸೋಹಮೂರ್ತಿಗಳಾಗಿ ನಮ್ಮೆಲ್ಲರ ಹೃದಯ ಮಂದಿರದಲ್ಲಿ ಅಮರರಾಗಿದ್ದಾರೆ.
-ಪೂಜ್ಯಶ್ರೀ ಷ.ಬ್ರ. ವೀರಮಹಾಂತೇಶ್ವರ ಶಿವಾಚಾರ್ಯರು
ಪೀಠಾಧಿಪತಿಗಳು,
ವೀರತಪಸ್ವಿ ಶ್ರೀ ಗುರು ಮಹಾಂತೇಶ್ವರ ಮಠ, ಚಿನ್ಮಯಗಿರಿ


ಮುಖ್ಯಾಂಶಗಳು :

  • 12 ಮಾರ್ಚ, 2023 ರಿಂದ 21 ಮಾರ್ಚ, 2023ರವರೆಗೆ 11 ದಿನಗಳ ಕಾಲ ಪುರಾಣ.
  • 22 ಮಾರ್ಚ, 2023ರಂದು ನಂದಿ ಮಹಾಮನೆಯಲ್ಲಿ `ನಂದಿಧ್ವಜ’ದ ಸ್ಥಾಪನೆ.
  • 23 ಮಾರ್ಚ, 2023ರಂದು ಸಂಜೆ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ಬೀರಲಿಂಗೇಶ್ವರರ ಹೇಳಿಕೆ, 8ಗಂಟೆಗೆ ಅಗ್ನಿ ಸ್ಪರ್ಷ.
  • 24 ಮಾರ್ಚ, 2023ರಂದು ಬೆಳಗ್ಗೆ 5ಗಂಟೆಗೆ ಅಗ್ನಿ ಪ್ರವೇಶ, ನಂತರ ಅಗ್ನಿ ಮಹಾಮಂಗಲ
  • ಜಾತ್ರಾ ಮಹೋತ್ಸವದ ನಿಮಿತ್ತ ನಿತ್ಯ ಗೀಗೀ ಪದಗಳು, ಸಂಗೀತ ಕಾರ್ಯಕ್ರಮ.