ಹುಟ್ಟುಹಬ್ಬದ ಉಡುಗೊರೆ ಗೊತ್ತಿಲ್ಲ: ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ೬೨ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಶಾಸಕ ದಿನೇಶ್ ಗುಂಡೂರಾವ್ ಮತ್ತಿತರರು ಇದ್ದಾರೆ.

ಬೆಂಗಳೂರು,ಮೇ೧೫:ಕಾಂಗ್ರೆಸ್ ಹೈಕಮಾಂಡ್ ನನಗೆ ಹುಟ್ಟುಹಬ್ಬದ ಉಡುಗೊರೆ ಕೊಡುತ್ತದೋ ಬಿಡುತ್ತದೋ ನನಗೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡಿ.ಕೆ. ಶಿವಕುಮಾರ್, ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಕಾಂಗ್ರೆಸ್‌ನ ಪದ್ಧತಿಯಂತೆ ಶಾಸಕರು ಅಭಿಪ್ರಾಯ ನೀಡಿದ್ದಾರೆ. ಆದರೆ, ಹೈಕಮಾಂಡ್ ಉಡುಗೊರೆ ಕೊಡುತ್ತದೋ ಬಿಡುತ್ತದೋ ನನಗೆ ಗೊತ್ತಿಲ್ಲ ಎಂದರು. ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ೧೩೫ ಕ್ಷೇತ್ರಗಳನ್ನು ನೀಡುವ ಮೂಲಕ ಗಿಫ್ಟ್ ಕೊಟ್ಟಿದ್ದಾರೆ. ಇದೇ ನನಗೆ ನನ್ನ ಬರ್ತಡೆ ಗಿಫ್ಟ್ ಇದಕ್ಕಿಂತ ಹೆಚ್ಚಿಗೆ ಏನು ಬೇಕು ಎಂದು ಅವರು ಹೇಳಿದರು.ರಾಜ್ಯದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ನನ್ನ ಅಧ್ಯಕ್ಷತೆಯ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಇದಕ್ಕಿಂತ ದೊಡ್ಡ ಸಂತಸ ಇಲ್ಲ ಎಂದು ಅವರು ಹೇಳಿದರು.
ಹುಟ್ಟುಹಬ್ಬದ ಆಚರಣೆ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಂಬಂಧ ನಿನ್ನೆ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕರ ಸಭೆಯ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರು ತಮ್ಮ ೬೨ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ಇದ್ದರು.