ಹುಟ್ಟುವ ಮಗುವಿನ ಮೇಲೂ ಸಾಲದ ಹೊರೆ

ಕೋಲಾರ, ಮೇ,೨೨- ರಾಜ್ಯದಲ್ಲಿ ಐದು ಗ್ಯಾರೆಂಟಿಗಳನ್ನು ಜಾರಿ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಪಕ್ಷ ಇದೀಗ ಯುಟರ್ನ್ ಮಾಡಿರುವುದು ನೋಡಿದರೆ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ ಒಂದು ವೇಳೆ ಜಾರಿಗೊಳಿಸಿದರೂ ಕರ್ನಾಟಕದಲ್ಲಿ ಹುಟ್ಟುವ ಮಗುವಿನ ಮೇಲೆಯೂ ಸಾಲದ ಹೊರೆಯನ್ನು ಹಾಕಲಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಲೇವಡಿ ಮಾಡಿದರು.
ನಗರ ಹೊರವಲಯದ ಕೋಗಿಹಳ್ಳಿಯ ವರ್ತೂರು ಪ್ರಕಾಶ್ ನಿವಾಸದ ಸಮೀಪ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿಗಳಿಗೆ ೫೦ ಸಾವಿರ ಕೋಟಿರೂ ಆಗುತ್ತದೆ, ದಾರಿಯಲ್ಲಿ ಹೋಗೋರಿಗೆಲ್ಲಾ ಕೊಡಲು ಸಾಧ್ಯವಿಲ್ಲವೆಂದು ಸಿಎಂ ಮೊದಲ ದಿನವೇ ಹೇಳಿದ್ದಾರೆ. ಈ ಮಾತನ್ನು ಮೇ.೧೦ರ ಮೊದಲೇ ಹೇಳಿದ್ದರೆ ಸುಮಾರು ೪೦ ರಿಂದ ೫೦ ಕ್ಷೇತ್ರಗಳಲ್ಲಿ ಸೋಲುತ್ತಿದ್ದರು ಎಂದರು.
ಇಡೀ ರಾಜ್ಯದಲ್ಲಿ ಮತದಾನ ಪ್ರಮಾಣದ ಲೆಕ್ಕಾಚಾರದಲ್ಲಿ ನಮಗೆ ಕಡಿಮೆಯಾಗಿದ್ದು, ೧೦೦ ರಿಂದ ೩೦೦೦ ಸಾವಿರ ಮತಗಳ ಅಂತರದಲ್ಲಿ ಸುಮಾರು ೩೦ ಸ್ಥಾನಗಳನ್ನು ಕಳೆದುಕೊಂಡಿದ್ದೇವೆ. ಅದಕ್ಕೆ ಈ ಭ್ರಷ್ಟ ಕಾಂಗ್ರೆಸ್ ಸರಕಾರ ನೀಡಿರುವ ಗ್ಯಾರಂಟಿ ಕಾರ್ಡ್‌ಗಳ ಜತೆಗೆ ಒಂದು ಸಮುದಾಯವನ್ನು ಹತ್ತಿರವಾಗಿಸಿಕೊಳ್ಳಲು, ಅವರನ್ನು ಸೆಳೆಯುವ ಸಲುವಾಗಿ ಜಾತಿ, ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತಿದ್ದಾರೆ ಎಂದು ಆರೋಪಿಸಿದರು.
ಬಂಗಾರಪೇಟೆಯಲ್ಲಿ ಗೆದ್ದಿರುವ ಎಸ್.ಎನ್.ನಾರಾಯಣಸ್ವಾಮಿಗೆ ಸಂಬಂಧಿಸಿದಂತೆ ಮನೆ, ಕಾರಿನಲ್ಲಿ ಹಣ ಸಿಕ್ಕಿದ್ದು, ಚಿಹ್ನೆ, ಲೇಬಲ್, ಊರಿನ ಹೆಸರುಗಳನ್ನು ಬರೆದಿದ್ದ ಮಾಹಿತಿ ಲಭ್ಯವಾಗಿದೆ. ಇಡಿ, ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್‌ಗಳನ್ನು ನೀಡಿದ್ದು, ಅವರೂ ಸಹ ಅನರ್ಹರಾಗುತ್ತಾರೆ. ಬಿಜೆಪಿ ಅಭ್ಯರ್ಥಿಗಳು ಮಾಲೂರು, ಬಂಗಾರಪೇಟೆ ಹಾಗೂ ಮುಂದಿನ ಚುನಾವಣೆಯಲ್ಲಿ ಕೋಲಾರದಲ್ಲಿಯೂ ಗೆದ್ದೇ ಗೆಲ್ಲುತ್ತೇವೆ ಎಂದರು.