ಹುಚ್ಚು ನಾಯಿ ಕಡಿತ: ಮಗು ಸೇರಿ ಐದು ಮಂದಿಗೆ ಗಾಯ

ನವಲಗುಂದ,ಮಾ.20: : ತಾಲ್ಲೂಕಿನ ಕುಮಾರಗೊಪ್ಪ ಗ್ರಾಮದಲ್ಲಿ ಹುಚ್ಚು ನಾಯಿ ಕಡಿತದಿಂದ ನಾಲ್ಕು ವರ್ಷದ ಮಗು ಸೇರಿ ಐದು ಮಂದಿ ಗಾಯಗೊಂಡಿದ್ದಾರೆ.
ಯಮನೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಮಾರಗೊಪ್ಪ ಗ್ರಾಮದ ರಸ್ತೆಯಲ್ಲಿ ಜನರು ನಡೆದು ಹೋಗುತ್ತಿದ್ದ ವೇಳೆ ದಿಢೀರನೆ ಪ್ರತ್ಯಕ್ಷವಾದ ನಾಯಿ ಮಗು ಸೇರಿದಂತೆ ಹಲವರಿಗೆ ಕಚ್ಚಿ ಗಾಯಗೊಳಿಸಿದೆ. ನಾಲ್ಕೈದು ಕುರಿಮರಿಗಳಿಗೂ ಕೂಡಾ ಕಚ್ಚಿದೆ
ಇದೇ ವೇಳೆ ಗಂಭೀರವಾಗಿ ಗಾಯಗೊಂಡ ನಾಲ್ಕು ವರ್ಷದ ಬಾಲಕಿಗೆ ನವಲಗುಂದ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಉಳಿದ ಗಾಯಾಳುಗಳಿಗೆ ನವಲಗುಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದರು.