ಹುಚ್ಚುನಾಯಿಗೆ ಚುಚ್ಚುಮದ್ದು `ಲಸಿಕಾ ಸಪ್ತಾಹ’

ಪುತ್ತೂರು, ಸೆ.೨೫- ಪುತ್ತೂರಿನ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಹಾಗೂ ವರ್ಲ್ಡ್ ರೇಬಿಸ್ ಡೇ ಪ್ರಯುಕ್ತ ನಾಯಿಗಳಿಗೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಸಪ್ತಾಹಕ್ಕೆ ಸೆ.೨೪ರಂದು ಪುತ್ತೂರು ಪಶು ವೈದ್ಯ ಆಸ್ಪತ್ರೆಯ ವಠಾರದಲ್ಲಿ ಚಾಲನೆ ನೀಡಲಾಯಿತು.

ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಲಸಿಕಾ ಸಪ್ತಾಹಕ್ಕೆ ಚಾಲನೆ ನೀಡಿ, ಸರಕಾರ ಸ್ವಾತಂತ್ರ್ಯೋತ್ಸವದ ೭೫ನೇ ವರ್ಷಕ್ಕೆ ಸಂಬಂಧಿಸಿ ಹಾಕಿಕೊಂಡ ಅಜಾದಿ ಕಾ ಅಮೃತ್ ಮಹೋತ್ಸದಲ್ಲಿ ಹುಚ್ಚು ನಾಯಿ ಲಸಿಕಾ ಸಪ್ತಾಹದ ಮೂಲಕ ಸರಕಾರ ಜನರ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿದೆ. ಈ ನಿಟ್ಟಿನಲ್ಲಿ ಸರಕಾರದ ಯೋಜನೆಯನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಿ ಎಂದರು.

ಹಾಲು ಉತ್ಪಾದಕರ ಸಂಘದ ಅಧ್ಯಕ್ಷ, ನಗರಸಭೆ ಸದಸ್ಯ ಸುಂದರ ಪೂಜಾರಿ ಬಡಾವು ಮಾತನಾಡಿ, ನಾಯಿ ಸಾಕುವುದು ಮಾತ್ರವಲ್ಲ ಅದರ ಆರೋಗ್ಯ ಕಾಪಾಡಿದಾಗ ಎಲ್ಲರ ಆರೋಗ್ಯ ಕಾಪಾಡಿದಂತೆ ಎಂದು ಹೇಳಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಆಶೋಕ್ ಶೆಣೈ, ಪುತ್ತೂರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ಉಪಸ್ಥಿತರಿದ್ದರು.