ಹುಚ್ಚಮ್ಮದೇವಿ ದೇಗುಲದಲ್ಲಿ ಮಹಾಚಂಡಿಕಾ ಹೋಮ

??????

ಅರಸೀಕೆರೆ, ಜು. ೨೭- ತಾಲ್ಲೂಕಿನ ಸುಕ್ಷೇತ್ರ ಯಳವಾರೆ ಗ್ರಾಮದ ಹುಚ್ಚಮ್ಮ ದೇವಿ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ಜೇನುಕಲ್ ಸಿದ್ದೇಶ್ವರ ಸ್ವಾಮಿ, ಹುಚ್ಚಮ್ಮದೇವಿ ಹಾಗೂ ಕೋಡಮ್ಮದೇವಿ ಸಮ್ಮುಖದಲ್ಲಿ ಮಹಾ ಚಂಡಿಕಾ ಹೋಮ ನಡೆಯಿತು.
ಮಹಾ ಚಂಡಿಕಾ ಯಾಗದ ಅಂಗವಾಗಿ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡವು. ಸನ್ನಿಧಾನದಲ್ಲಿರುವ ಅಮ್ಮನವರ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ಮಹಾಸಂಕಲ್ಪ ಗಣಪತಿ ಪೂಜೆ, ಪುಣ್ಯಹ ಕಳಸ ಸ್ಥಾಪನೆ, ನವಗ್ರಹ ಹೋಮ ಹೀಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆದ ಬಳಿಕ ವಿದ್ವಾನ್ ಎಂ.ವಿ ಕೃಷ್ಣಮೂರ್ತಿ.ಹಾಗೂ ಹಾರನಹಳ್ಳಿ ಚನ್ನಕೇಶವ ದೇವಾಲಯದ ಅರ್ಚಕರಾದ ನಾಗೇಂದ್ರ ಅವರ ನೇತೃತ್ವದಲ್ಲಿ ಮಹಾ ಚಂಡಿಕಾ ಹೋಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಪೂರ್ಣಾವತಿ ಸಂದರ್ಭದಲ್ಲಿ ಶಾಸಕ ಕೆ.ಎಂ ಶಿವಲಿಂಗೇಗೌಡ, ಜಿ.ಪಂ. ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ. ದೇವಾಲಯದ ಅಭಿವೃದ್ಧಿ ಸಮಿತಿಯ ಬೋರನ ಕೊಪ್ಪಲು ಸ್ವಾಮಣ್ಣ, ಕೇಶವಣ್ಣ, ಗೋಪಿನಾಥ್, ರಾಜಣ್ಣ, ವೈ.ಕೆ. ದೇವರಾಜ್, ಗಿಜಿಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಧರ್ಮಶೇಖರ್, ಧರ್ಮೇಶ್, ನಾಗರಾಜ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪುರುಷೋತ್ತಮ್ ಸೆರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಮುಂಜಾನೆಯಿಂದಲೇ ಆರಂಭವಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಳವರೆ ಹಾರನಹಳ್ಳಿ, ಬೋರನಕಪ್ಪಲು, ಕಬ್ಬೂರ್ ಹಳ್ಳಿ, ಎರೇಹಳ್ಳಿ ಹೀಗೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುವ ಮೂಲಕ ಗ್ರಾಮ ದೇವತೆಯ ಕೃಪೆಗೆ ಪಾತ್ರರಾದರು.
ಮಹಾಚಂಡಿಕಾ ಹೋಮವನ್ನು ವಿಧಿವತ್ತಾಗಿ ನಡೆಸಿಕೊಟ್ಟ ಹಾರನಹಳ್ಳಿ ಚೆನ್ನಕೇಶವ ದೇವಾಲಯದ ಅರ್ಚಕರಾದ ನಾಗೇಂದ್ರ ಮಾತನಾಡಿ, ಯಳವರಮ್ಮ ದೇವಸ್ಥಾನದ ಸಮಿತಿ ಹಾಗೂ ಸುತ್ತ ಹತ್ತಾರು ಹಳ್ಳಿಯ ಗ್ರಾಮಸ್ಥರ ಸಂಕಲ್ಪದಂತೆ ಕೈಗೊಳ್ಳಲಾಗಿದ್ದ ಮಹಾ ಚಂಡಿಕಾ ಹೋಮ ಯಶಸ್ವಿಯಾಗಿ ಸಂಪನ್ನಗೊಂಡಿದ್ದು ಆಷಾಡ ಮಾಸದಲ್ಲಿ ಹೋಮ ಮಾಡುವುದರಿಂದ ಮತ್ತಷ್ಟು ಹೆಚ್ಚಿನ ಶಕ್ತಿ ವೃದ್ಧಿಸಲಿದೆ. ತಾಯಿ ಜಗನ್ಮಾತೆ ಹುಚ್ಚಮ್ಮ ದೇವಿಯು ಸರ್ವರಿಗೂ ಒಳಿತನ್ನು ಮಾಡಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸ್ವಾಮಣ್ಣ, ಲೋಕಕಲ್ಯಾಣ ಬಯಸಿ ಸಮಿತಿಯ ಪದಾಧಿಕಾರಿಗಳು ಹಾಗೂ ದೇವಿಯ ಭಕ್ತ ವೃಂದದ ವತಿಯಿಂದ ಹಮ್ಮಿಕೊಂಡಿದ್ದ ಮಹಾ ಚಂಡಿಕಾ ಹೋಮ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಸಹಕರಿಸಿದ ಪ್ರತಿಯೊಬ್ಬರಿಗೂ ದೇವಸ್ಥಾನದ ಅಭಿವೃದ್ದಿ ಸಮಿತಿ ಆಭಾರಿಯಾಗಿದೆ ಎಂದರು