ಹೀರಾ ಜಾತ್ರಾ ಮಹೋತ್ಸವ : ನೂತನ ಜೀವನಕ್ಕೆ ಕಾಲಿಟ್ಟ ೧೫ ಜೋಡಿಗಳುಸತಿ-ಪತಿಗಳ ನಡುವೆ ಹೊಂದಾಣಿಕೆ ಮುಖ್ಯ-ಜಯೇಂದ್ರ

ಸಿರವಾರ.ಮಾ.೧೬- ದಾಂಪತ್ಯ ಜೀವನದಲ್ಲಿ ಬರುವ ಎಲ್ಲಾ ಸಂಕಷ್ಟಗಳನ್ನು ನಿವಾರಿಸಿಕೊಂಡು ಅನ್ಯೋನ್ಯವಾಗಿ ಜೀವನ ಸಾಗಿಸಿ, ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ನಂದಿಹಾಳ ಮಠದ ಜಯೇಂದ್ರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಹೀರಾ ಗ್ರಾಮದಲ್ಲಿ ಶ್ರೀ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪ. ಪೂ. ಅಯ್ಯಪ್ಪ ತಾತನವರ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದ ಅವರು ಸಾಮೂಹಿಕ ವಿವಾಹ ಎಂಬುದು ದೇವರ ಸಮ್ಮುಖದಲ್ಲಿ ನಡೆಯುವ ಮದುವೆ ಇಲ್ಲಿ ಮದುವೆಯಾದರೆ ಮುಂದಿನ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ದಾಂಪತ್ಯ ಜೀವನದಲ್ಲಿ ಮಾತು ಬರುತ್ತದೆ ಹೋಗುತ್ತದೆ,ಜಗಳ ಮಾಡಿಕೊಳದೆ ಅನೋನ್ಯತೆಯಿಂದ ಇರಬೇಕು ಎಂದರು.
ಜಾಗಟಗಲ್ ಮಠದ ಬೆಟ್ಟದಯ್ಯಪ್ಪ ತಾತನವರು ಮಾತನಾಡಿ ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿಯ ಬದುಕು ಕಂಡುಕೊಳ್ಳಬಹುದು. ಜೊತೆಗೆ ಪರಸ್ಪರ ಪ್ರೀತಿ, ವಿಶ್ವಾಸ ವೃದ್ಧಿಸುತ್ತದೆ. ಮನುಷ್ಯ ಜೀವನದಲ್ಲಿ ಸರಳತೆ ಪಾಲಿಸಬೇಕು. ಅಂದಾಗ ಮಾತ್ರ ಜಿವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎಂದರು.
೧೫ ನವ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಧರ್ಮ ಸಭೆಯಲ್ಲಿ ಮಠದ ಪೀಠಾಧಿಪತಿ ಅಯ್ಯಪ್ಪ ತಾತ ಹಾಗೂ ದಂಪತಿಗೆ ತೃತೀಯ ಭಾರಿ ತುಲಾಭಾರ ಹಾಗೂ ಸಂಜೆ ಮುತೈದೆಯರಿಂದ ಉಚ್ಛ್ರಾಯ ಮಹೋತ್ಸವ ಜರುಗಿತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಚುಕ್ಕಿ ಸೂಗಪ್ಪ ಸಾಹುಕಾರ್, ನರಸಣ್ಣ ತಾತ, ಸಿರವಾರ ಪಿಎಸ್‌ಐ ಮಾರುತಿ ವಿ.ಎಸ್, ಗ್ರಾ.ಪಂ ಅಧ್ಯಕ್ಷರ ಮಗ ವಿಕ್ರಂ ಗೌಡ, ಗ್ರಾಮ ಪಂಚಾಯತಿ ಸದಸ್ಯ ಅಯ್ಯಪ್ಪ ದೊರೆ, ಹನುಮಂತ್ರಾಯ ಗೌಡ ಪೋ.ಪಾ, ಸಂಗಯ್ಯ ಸ್ವಾಮಿ ಚಿಂಚರಕಿ, ಎಎಸ್‌ಐ ಬಸನಗೌಡ, ನರಸಣ್ಣ ದೊರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿದ್ದರು.