ಹೀರಾಪೂರ, ನೋಬೆಲ್ ಶಾಲೆ ಮಾರ್ಗದಲ್ಲಿನ ಎರಡು ಮಾರಾಟ ವಲಯಗಳ ರಚನೆಗೆ ವಿರೋಧ

ಕಲಬುರಗಿ.ನ.11: ಬೀದಿ ವ್ಯಾಪಾರಿಗಳ (ಸಂರಕ್ಷಣೆ ಜೀವನೋಪಾಯ ನಿಯಂತ್ರಣ) ಅಧಿನಿಯಮ 14ರ ಅಡಿಯಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಗುರುತಿಸಲಾದ ಐದು ಮಾರಾಟ ವಲಯಗಳಲ್ಲಿ ಎರಡು ಮಾರಾಟ ವಲಯಗಳ ರಚನೆಯನ್ನು ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಗನ್ನಾಥ್ ಎಸ್. ಸೂರ್ಯವಂಶಿ ಅವರು ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ನೋಬೆಲ್ ಶಾಲೆಯಿಂದ ಹೊಸ ಜೇವರ್ಗಿ ರಸ್ತೆವರೆಗಿನ ಹಾಗೂ ಕಣ್ಣಿ ಮಾರುಕಟ್ಟೆಯಿಂದ ಹೀರಾಪೂರವರೆಗಿನ ಮಾರಾಟ ವಲಯಗಳನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.
ಉದ್ದೇಶಿತ ಈ ಎರಡೂ ವಲಯಗಳನ್ನು ಕೇಂದ್ರ ಬಸ್ ನಿಲ್ದಾಣದಿಂದ ಕಣ್ಣಿ ಮಾರುಕಟ್ಟೆಯವರೆಗಿನ ಮಾರಾಟ ವಲಯದ ವ್ಯಾಪ್ತಿಗೆ ಸೇರಿಸಿ ಒಂದೇ ವಲಯವನ್ನಾಗಿ ಮಾಡುವಂತೆ ಒತ್ತಾಯಿಸಿದ ಅವರು, ಒಂದು ವೇಳೆ ಮೂರು ವಲಯಗಳ ವಿಲೀನದ ಕಾರಣವಾಗಿ ದೊಡ್ಡ ವಲಯ ರಚನೆ ಸಾಧ್ಯವಾಗದೇ ಹೋದಲ್ಲಿ ಕಣ್ಣಿ ಮಾರುಕಟ್ಟೆಯಿಂದ ಹೀರಾಪೂರವರೆಗಿನ ಮಾರಾಟ ವಲಯ ಕೈಬಿಡಬೇಕು ಎಂದು ಆಗ್ರಹಿಸಿದರು.
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಉಳಿದಂತೆ ಹಾಲು ಒಕ್ಕೂಟದ ಡೈರಿಯಿಂದ ಹನುಮಾನ್ ಮಂದಿರದವರೆಗೆ, ಕೇಂದ್ರ ಬಸ್ ನಿಲ್ದಾಣದಿಂದ ಕಣ್ಣಿ ಮಾರುಕಟ್ಟೆಯವರೆಗೆ, ರಾಮ ಮಂದಿರದಿಂದ ಹೊಸ ಜೇವರ್ಗಿ ರಸ್ತೆಯವರೆಗಿನ ಒಟ್ಟು ಮೂರು ಮಾರಾಟ ವಲಯಗಳ ರಚನೆಗೆ ಯಾವುದೇ ರೀತಿಯಲ್ಲಿ ವಿರೋಧವಿಲ್ಲ ಎಂದು ಅವರು ಹೇಳಿದರು.
ಬೀದಿ ವ್ಯಾಪಾರಿಗಳಿಗೆ ಯಾವುದೇ ಅನುಕೂಲ ಇರದೇ ಇರುವುದರಿಂದ ಹಾಗೂ ಜನಸಂದಣಿ ಇಲ್ಲದಿರುವುದರಿಂದ ಎರಡೂ ಮಾರಾಟ ವಲಯ ಕೈಬಿಡಬೇಕು ಎಂದು ತಿಳಿಸಿದ ಅವರು, ಹೈಕೋರ್ಟ್‍ನ ಆದೇಶವನ್ನು ಗಮನಿಸಿ ಚೌಪಟ್ಟಿಯಲ್ಲಿ ಒಂದು ಮಾರಾಟ ವಲಯ ಸ್ಥಾಪಿಸಬೇಕು. ಮತ್ತೊಂದು ಮಾರಾಟ ವಲಯವನ್ನು ಸೂಪರ್ ಮಾರ್ಕೆಟ್‍ನ ಹಳೆ ಜೈಲು ಪ್ರದೇಶದಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಈ ಮುಂಚೆ ನಗರದಲ್ಲಿ ಏಳು ಮಾರಾಟ ವಲಯಗಳ ರಚನೆಗೆ ಸಂಬಂಧಿಸಿದಂತೆ ಸಿದ್ದಪಡಿಸಲಾಗಿರುವ ಪ್ರಸ್ತಾವನೆಯಲ್ಲಿ ಸೂಪರ್ ಮಾರ್ಕೆಟ್ ಪ್ರದೇಶವೂ ಒಂದಾಗಿದೆ. ಅದನ್ನು ಯಾತಕ್ಕೆ ಕೈಬಿಡಲಾಗಿದೆ? ಎಂದು ಖಾರವಾಗಿ ಪ್ರಶ್ನಿಸಿದ ಅವರು, ಚೌಪಟ್ಟಿ ಮತ್ತು ಹಳೆಯ ಜೈಲು ಪ್ರದೇಶದಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದು, ಅಲ್ಲಿ ವಲಯಗಳ ರಚನೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಗರದ ವಾಣಿಜ್ಯ ವಹಿವಾಟುಗಳ ಕೇಂದ್ರ ಸ್ಥಾನವಾದ ಸೂಪರ್ ಮಾರ್ಕೆಟ್‍ನಲ್ಲಿ ಬೀದಿ ವ್ಯಾಪಾರಿಗಳ ವಲಯ ರಚನೆ ಕೈಬಿಟ್ಟಿರುವುದು ಸರಿಯಲ್ಲ. ಈ ತಾರತಮ್ಯ ನಿವಾರಿಸಬೇಕು ಎಂದು ಅವರು ಆಗ್ರಹಿಸಿದರು.
ನಗರದಲ್ಲಿನ ಐದು ಮಾರಾಟ ವಲಯಗಳಿಗೆ ಕೇವಲ 130 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ನಗರದಲ್ಲಿ ಸುಮಾರು 5000ದಿಂದ 6000 ಬೀದಿ ವ್ಯಾಪಾರಿಗಳಿದ್ದಾರೆ. ಉತ್ತರ ವಲಯದಲ್ಲಿ ಕೈಗೊಂಡ ಸಮೀಕ್ಷೆಯಲ್ಲಿ 2211 ಜನರನ್ನು ಗುರುತಿಸಲಾಗಿದೆ. ಇಲ್ಲಿಯವರೆಗೆ 890 ಜನರಿಗೆ ಮಾತ್ರ ಗುರುತಿನ ಚೀಟಿ ನೀಡಲಾಗಿದೆ. ದಕ್ಷಿಣ ವಲಯದ ವ್ಯಾಪ್ತಿಯಲ್ಲಿ 2050 ಗುರುತಿಸಲಾಗಿದ್ದು, ಅವರಲ್ಲಿ 1200 ಜನರಿಗೆ ಮಾತ್ರ ಗುರುತಿನ ಚೀಟಿ ಕೊಡಲಾಗಿದೆ. ಸಮೀಕ್ಷೆಯಿಂದ ಕೈಬಿಟ್ಟು ಹೋಗಿರುವ ಅರ್ಹ ಬೀದಿ ವ್ಯಾಪಾರಿಗಳನ್ನು ಗುರುತಿಸಲು ಎರಡನೇ ಸುತ್ತಿನ ಸಮೀಕ್ಷೆ ಕೈಗೊಂಡು ಅರ್ಹರೆಲ್ಲರಿಗೂ ಗುರುತಿನ ಚೀಟಿ ಕೊಡುವಂತೆ ಅವರು ಒತ್ತಾಯಿಸಿದರು.
ಬೇಡಿಕೆಗಳಿಗೆ ಸ್ಪಂದಿಸದೇ ಹೋದಲ್ಲಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಡಾ. ವೇದಮೂರ್ತಿ, ರವಿ ಒಂಟಿ, ಸವಿತಾ ಜಿಂಗಾಡೆ, ಶಿವುಕುಮಾರ್ ಮುಂತಾದವರು ಉಪಸ್ಥಿತರಿದ್ದರು.