
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮೇ.26: ತಾಲೂಕಿನ ಹಿರೇಕುರುವತ್ತಿಯ ಹಿರೇಮಠದ ಸಿದ್ದನಂದೀಶ್ವರ ಸ್ವಾಮೀಜಿಯ 16ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ 9 ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದರು.
ವರ್ಧಂತಿ ಮಹೋತ್ಸವ ಪ್ರಯುಕ್ತ ಸಿದ್ದನಂದೀಶ್ವರ ಸ್ವಾಮೀಜಿಗೆ ಭಕ್ತರು ತುಲಾಭಾರ ಸೇವೆ ಸಲ್ಲಿಸಿದರು. ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮಾನಿಹಳ್ಳಿಯ ಮಳೆಯೋಗೀಶ್ವರ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿವೆ. ಪ್ರತಿಷ್ಠೆಗಾಗಿ ಅದ್ದೂರಿ ಮದುವೆ ಮಾಡಿಕೊಳ್ಳುವ ಬದಲು ಸರಳ ವಿವಾಹವಾಗಬೇಕು. ಮಠಗಳಲ್ಲಿ ಮದುವೆಯಾದವರು ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ದಂಪತಿಗಳಾಗಿ ಬಾಳಬೇಕು ಎಂದು ತಿಳಿಸಿದರು.
ದಿಂಡದಹಳ್ಳಿಯ ಪಶುಪತಿ ಶಿವಾಚಾರ್ಯ ಸ್ವಾಮೀಜಿ, ತೆಲಿಗಡ್ಡಿ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅಂಗೂರ ಹಿರೇಮಠದ ಶಿವಯೋಗಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖಂಡರಾದ ಶಿವಲಿಂಗಪ್ಪ, ಅಶೋಕಪ್ಪ, ಬಸವನಗೌಡ, ಕೊಟ್ರೇಶಪ್ಪ, ಚನ್ನಬಸಪ್ಪ ಸುಂಕದ, ಕೆ.ಪ್ರಕಾಶ, ವಿರುಪಾಕ್ಷಪ್ಪ ಇತರರು ಇದ್ದರು. ಮಠದ ಧಾರ್ಮಿಕ ಕಾರ್ಯಕ್ರಮಗಳಿಗೆ ನೆರವಾದ ಭಕ್ತರಿಗೆ ಗುರುರಕ್ಷೆ ನೀಡಲಾಯಿತು.