ಹಿರಿಯ ಹಾಸ್ಯಕಲಾವಿದ ಮೋಹನ್ ಜೂನೇಜ ವಿಧಿವಶ

ಬೆಂಗಳೂರು, ಮೇ ೭- ಕನ್ನಡ ಹಿರಿತೆರೆ ಮತ್ತು ಕಿರುತೆರೆಯಲ್ಲಿ ನಟಿಸಿ ಜನಪ್ರಿಯ ನಟರಾಗಿದ್ದ ಹಿರಿಯ ಹಾಸ್ಯಕಲಾವಿದ ಮೋಹನ್ ಜೂನೇಜ ವಿಧಿವಶರಾಗಿದ್ದಾರೆ.ಮೋಹನ್ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮೋಹನ್ ಅವರು ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಚಿಕ್ಕಬಾಣಾವರದ ಸಪ್ತಗಿರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಅವರಲ್ಲಿ ತೀವ್ರ ಅನಾರೋಗ್ಯ ಕಾಣಿಸಿಕೊಂಡಿತ್ತು. ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದ್ದಾರೆ. ಇವರ ನಿಧನದಿಂದ ಕುಟುಂಬಸ್ಥರು ಅತೀವ ದುಃಖ ವ್ಯಕ್ತಪಡಿಸಿದ್ದಾರೆ.ಬೆಂಗಳೂರಿನ ಉತ್ತರ ತಾಲ್ಲೂಕಿನ ತಮ್ಮೇನಹಳ್ಳಿಯಲ್ಲಿ ವಾಸಿಸುತ್ತಿದ್ದ ಮೋಹನ್ ಅವರು ಕಳೆದ ಕೆಲ ಸಮಯಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಮೃತದೇಹವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಕುಟುಂಬಸ್ಥರು, ಬಂಧುಗಳು, ಕಲಾವಿದರು ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಅಥವಾ ನಾಳೆ ನಡೆಯಲಿದೆ.ಮೋಹನ್ ಜುನೇಜಾ ಅವರು ಕನ್ನಡ ಹಿರಿತೆರೆ ಮತ್ತು ಕಿರುತೆರೆಯಲ್ಲಿ ತೊಡಗಿಸಿಕೊಂಡಿದ್ದರು. ’ವಠಾರ’ ಧಾರಾವಾಹಿಯಿಂದ ಜನಪ್ರಿಯರಾದ ಮೋಹನ್ ನಂತರ ಹಲವಾರು ಚಿತ್ರಗಳಲ್ಲಿ ಪೋಷಕ ನಟರಾಗಿ ಮತ್ತು ಹಾಸ್ಯನಟನಾಗಿ ರಂಜಿಸಿದ್ದಾರೆ. ಕೆಜಿಎಫ್-೧ ಒಂದು ಮತ್ತು ಕೆಜಿಎಫ್-೨, ನವಗ್ರಹ, ಗಣೇಶನ ಗಲಾಟೆ, ಜೋಗಿ ಸೇರಿದಂತೆ ೧೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚೆಲ್ಲಾಟ ಚಿತ್ರದ ಮಧುಮಗ ಪಾತ್ರ ಮೋಹನ್ ಅವದಿಗೆ ಹೆಚ್ಚು ಖ್ಯಾತಿ ಕೊಟ್ಟಿತ್ತು. ಅವರ ನಿಧನಕ್ಕೆ ಆಪ್ತರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.