ಹಿರಿಯ ಸಾಹಿತಿ ವಿ.ಎಸ್.ಕಾಂತನವರ ೯೦ ನೇ ಹುಟ್ಟುಹಬ್ಬದ ಸಂಭ್ರಮ

ರಾಯಚೂರು.ಅ.೧೦- ಸಾಹಿತ್ಯ ಮತ್ತು ಅಧ್ಯಾತ್ಮ ಬದುಕನ್ನು ಉಜ್ವಲವಾಗಿಸುತ್ತವೆ. ಸಾಹಿತ್ಯದ ಒಡನಾಟ ಅಧ್ಯಾತ್ಮ ಚಿಂತನೆ ಅಧ್ಯಯನ ಅಧ್ಯಾಪನಗಳು ನನಗೆ ಖುಷಿ ತಂದುಕೊಟ್ಟಿವೆ ಎಂದು ಹಿರಿಯ ಸಾಹಿತಿ ವಿ.ಎಸ್.ಕಾಂತನವರು ಹೇಳಿದರು.
ಅವರು ತಮ್ಮ ೯೦ನೇ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಿಷ್ಯರಿಂದ ಸನ್ಮಾನ ಹಾಗೂ ಶುಭ ಹಾರೈಕೆಗಳನ್ನು ಸ್ವೀಕರಿಸಿ ಮಾತನಾಡಿ ಹಲವು ವರ್ಷಗಳಿಂದ ನನ್ನ ಶಿಷ್ಯರು ಹಾಗೂ ಆತ್ಮೀಯರು ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿರುವುದು ತುಂಬಾ ಸಂತೋಷದ ಸಂಗತಿ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಅವರು ಕಾಂತನವರ ಸಾಹಿತ್ಯ ಯಾತ್ರೆ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಕೊಪ್ಪಳದ ಡಾ. ಫಕೀರಪ್ಪ ವಜ್ರಬಂಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ದ್ವಾರಕಾನಾಥಾಚಾರ್ಯರು ಆಗಮಿಸಿ ಕಾಂತನವರನ್ನು ಸನ್ಮಾನಿಸಿ ಫಲ ಮಂತ್ರಾಕ್ಷತೆಗಳನ್ನು ನೀಡಿ ಹರಸಿದರು.
ಮಧು ಪಾಂಡೆ, ಸಿದ್ರಾಮಯ್ಯ ಗುಡಿಮಠ, ಕೊಂಡಾ ವೆಂಕಟೇಶ, ಪಲುಗುಲ ನಾಗರಾಜ, ಜಿ.ಬಿ.ಕುಲಕರ್ಣಿ, ತಿಮ್ಮಯ್ಯ, ಮಂಡಲಗಿರಿ ಪ್ರಸನ್ನ, ಸತ್ಯಬೋಧ ಕಾಂತನವರ ಮಾತನಾಡಿದರು. ಗಾಯತ್ರಿ ಶಲವಡಿ ಪ್ರಾರ್ಥಿಸಿದರು. ವೀಣಾ ಆನಂದ ಕುಲಕರ್ಣಿ ಸ್ವಾಗತಿಸಿದರು. ಡಿ.ಕೋಮಲಾ ಕಾರ್ಯಕ್ರಮ ನಡೆಸಿಕೊಟ್ಟರು. ಅರುಣ ವಿ.ಎಸ್.ಕಾಂತನವರ ವಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ನಗರದ ಸಾಹಿತಿಗಳು, ಶಿಷ್ಯವೃಂದ ಗುರುಗಳನ್ನು ಗೌರವಿಸಿ ಶುಭ ಕೋರಿದರು.