ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ ನಿಧನ

ಕಲಬುರಗಿ,ಜೂ.4-ನಾ‌ಡಿನ ಹಿರಿಯ ಕವಿ ಪ್ರೊ.ವಸಂತ ಕುಷ್ಟಗಿ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲೋ ಬಿ.ಪಿ.ಯಿಂದಾಗಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಯಿತು.
ನೂತನ ವಿದ್ಯಾಲಯ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಅವರು ಸೇವೆ ಸಲ್ಲಿಸಿದ್ದರು.
ಕಾವ್ಯ ಮತ್ತು ದಾಸ ಸಾಹಿತ್ಯದಲ್ಲಿ ಸಾಹಿತ್ಯ ಕೃಷಿ ಮಾಡಿದ್ದ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದರು.
ಪ್ರೊ.ವಸಂತ ಕುಷ್ಟಗಿ ಅವರ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ದೊರೆತಿದ್ದು, ಎನ್.ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.
@12bc =ಶೋಕ
ಕಲ್ಯಾಣ ಕರ್ನಾಟಕದ ಹಿರಿಯ ಸಾಹಿತಿ ಮತ್ತು ನಾಲ್ಕು ದಶಕಗಳಕಾಲ ಸಾಹಿತ್ಯ ಜಗತ್ತಿಗೆ ತಮ್ಮನ್ನು ಸಮರ್ಪಿಸಿಕೊಂಡ ಪ್ರೊ.ವಸಂತ ಕುಷ್ಟಗಿ ಅವರ ನಿಧನಕ್ಕೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಂಸದ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಹಿರಿಯ ರಂಗಕರ್ಮಿ ಪ್ರಭಾಕರ ಸಾತಖೇಡ, ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ, ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಬಿ.ಎಚ್.ನಿರಗುಡಿ, ವಿಜಯಕುಮಾರ ತೇಗಲತಿಪ್ಪಿ, ಅಂಬಾರಾಯ ಕೋಣೆ ಸೇರಿದಂತೆ ಸಾಹಿತ್ಯ ಲೋಕದ ಅನೇಕ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
ಪ್ರೊ.ಕುಷ್ಟಗಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಅಗಲಿದ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಅಪಾರ ಶಿಷ್ಯವೃಂದ, ಸಾಹಿತ್ಯ ಬಳಗ ಮತ್ತು ಪರಿವಾರಕ್ಕೆ ಅವರ ಅಗಲಿಕೆಯಿಂದಾದ ದು:ಖ ತಡೆದುಕೊಳ್ಳುವ ಶಕ್ತಿ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.