ಹಿರಿಯ ಸಾಹಿತಿಗಳ ಆಶೀರ್ವಾದದೊಂದಿಗೆ ಡಾ. ರಾಜಕುಮಾರ ಹೆಬ್ಬಾಳೆ ನಾಮಪತ್ರ ಸಲ್ಲಿಕೆ

ಬೀದರ:ಎ.6: ನೂರಾರು ಹಿರಿಯ ಸಾಹಿತಿಗಳು, ಬರಹಗಾರರು, ಮಹಿಳಾ ಸಾಹಿತಿಗಳು ಹಾಗೂ ಕಲಾವಿದರೊಂದಿಗೆ ಅವರ ಆಶೀರ್ವಾದ ಪಡೆದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿಗಳಾದ ಡಾ. ರಾಜಕುಮಾರ ಹೆಬ್ಬಾಳೆಯವರು ಇಲ್ಲಿಯ ತಹಸೀಲ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಕರ್ನಾಟಕ ಸಾಹಿತ್ಯ ಸಂಘದಿಂದ ತಾಯಿ ಭುವನೇಶ್ವರಿ ಹಾಗೂ ವಿಶ್ವಗುರು ಬಸವಣ್ಣನವರ ಪೂಜೆ ಸಲ್ಲಿಸಿದ ನಂತರ ಶೇಷಪ್ಪಾ ಚಿಟ್ಟಾ ಹಲಗೆ ಕಲಾವಿದರು ಹಾಗೂ ಲಂಬಾಣಿ ಜನಪದ ಕಲಾವಿದರ ನೃತ್ಯದೊಂದಿಗೆ ಅಂಬೇಡ್ಕರ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಭಗತಸಿಂಗ್ ವೃತ್ತಕ್ಕೆ ಮಾಲಾರ್ಪಣೆ ಸಲ್ಲಿಸಿ ಮ. 12-30ಕ್ಕೆ ಸರಿಯಾಗಿ ನಾಮಪತ್ರ ಸಲ್ಲಿಸಲಾಯಿತು.

ಹಿರಿಯ ಸಾಹಿತಿಗಳಾದ ಪಂಚಾಕ್ಷರಿ ಪುಣ್ಯಶೆಟ್ಟಿಯವರು ಮಾತನಾಡಿ “ಡಾ. ರಾಜಕುಮಾರ ಹೆಬ್ಬಾಳೆಯವರು ಶತಾಯಗತಾಯ ಈ ಬಾರಿ ಗೆಲ್ಲಲೇಬೇಕು. ನಮ್ಮೆಲ್ಲಾ ಹಿರಿಯರ ಆಶೀರ್ವಾದ ಅವರ ಮೇಲಿದೆ. ರಾಜಕುಮಾರ ಒಂದು ಕ್ಷಣ ಕಾಲಹರಣ ಮಾಡದೆ ನಿರಂತರ ಕಲೆ ಮತ್ತು ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಸಂಘಕ್ಕೆ ಹಾಗೂ ತರಬೇತಿ ಕೇಂದ್ರಕ್ಕೆ ಕೇಂದ್ರದಿಂದ ಲಕ್ಷಾಂತರ ರೂಪಾಯಿ ಅನುದಾನ ತಂದು ಬೀದರ ತಾಜ್‍ಮಹಲ್ ಆಗಿ ನಿರ್ಮಾಣ ಮಾಡಿದ್ದಾರೆ. ಬಹುಶಃ ಡಾ. ರಾಜಕುಮಾರ ಅವರ ಪರಿಚಯ ಪತ್ರ ನೋಡಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರಿನ ಕೇಂದ್ರ ಸಮಿತಿ ಅವರನ್ನು ಕಸಾಪ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಬಹುದಾಗಿತ್ತು. ಆದರೆ ಈ ಹಿಂದಿನ ಅಧ್ಯಕ್ಷರ ಮಾತು ತಪ್ಪುವಿಕೆಯಿಂದಾಗಿ ವಿನಾಕಾರಣ ಚುನಾವಣೆ ನಡೆಸಬೇಕಾಗಿ ಬಂದಿದೆ. ಅದರೂ ಕೂಡಾ ರಾಜಕುಮಾರನಿಗೆ ಈ ಬಾರಿ ಕಸಾಪ ಅಜೀವ ಸದಸ್ಯರು ಖಂಡಿತ ಕೈಹಿಡಿಯುತ್ತಾರೆ. ಅವರ ಗೆಲುವು ನಿಶ್ಚಿತ ಎಂದು ಪುಣ್ಯಶೆಟ್ಟಿ ತಿಳಿಸಿದರು.

ಹಿರಿಯ ಸಾಹಿತಿಗಳಾದ ಡಾ. ಎಂ.ಜಿ. ದೇಶಪಾಂಡೆಯವರು ಮಾತನಾಡಿ “ಡಾ. ರಾಜಕುಮಾರ ಹೆಬ್ಬಾಳೆಯವರು ಈ ಬಾರಿ ಗೆಲ್ಲುತ್ತಿದ್ದಾರೆ. ಬೀದರ ಜಿಲ್ಲೆಯ ಸಾಹಿತಿಗಳನ್ನು ಹಾಗೂ ಕಲಾವಿದರನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಕಾರ್ಯ ಹೆಬ್ಬಾಳೆ ಮಾಡಿದ್ದಾರೆ. ಕೇವಲ ಕಲೆ ಮತ್ತು ಸಾಹಿತ್ಯ ಮಾತ್ರವಲ್ಲದೆ ಕೋವಿಡ್ ಸಂದರ್ಭದಲ್ಲಿ ತನ್ನ ಪ್ರಾಣಭಯ ತೊರೆದು ಸುಮಾರು 4 ಸಾವಿರ ಗಂಟಲು ದ್ರವ ಪರೀಕ್ಷಿಸಿ, ಸ್ವತಃ ಕೊರೊನಾ ವೈರಸ್‍ಗೆ ತುತ್ತಾಗಿ ಸಾವು ಗೆದ್ದು ಬಂದಿದ್ದಾರೆ. ಇಂತಹ ಪರಿಶ್ರಮ ಜೀವಿ ಡಾ. ರಾಜಕುಮಾರ ಹೆಬ್ಬಾಳೆಯವರಿಗೆ ನಮ್ಮ ಹಾಗೂ ಎಲ್ಲಾ ಹಿರಿಯ ಸಾಹಿತಿಗಳ ಒಕ್ಕೋರಲ ಬೆಂಬಲವಿದೆ. ಈ ಬಾರಿ ಹೆಬ್ಬಾಳೆ ಗೆಲ್ಲುತ್ತಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರಲ್ಲದೆ ಎಲ್ಲಾ ಕಸಾಪ ಅಜೀವ ಸದಸ್ಯರು ಡಾ. ಹೆಬ್ಬಾಳೆಯವರನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.

ಹುಮನಾಬಾದ ಸಾಹಿತಿಗಳಾದ ಡಾ. ಸೋಮನಾಥ ಯಾಳವಾರ ಅವರು ಮಾತನಾಡಿ “ಸಾಹಿತಿಗಳ ಕಲಾವಿದರ ಸ್ಪೂರ್ತಿಗಂಗೋತ್ರಿಗಳಾದ ವಿನಯಶೀಲ ಡಾ. ರಾಜಕುಮಾರ ಅವರನ್ನು ಸರ್ವರೂ ಬೆಂಬಲಿಸಿ ಗೆಲ್ಲಿಸಿರಿ ಎಂದು ಮನವಿ ಮಾಡಿದರು.

ಹಿರಿಯ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ ಮಾತನಾಡಿ “ಜವಾಬ್ದಾರಿಯಿಂದ ಸಮಾಜಕ್ಕಾಗಿ ತನ್ನ ಪ್ರಾಣದ ಹಂಗನ್ನು ತೊರೆದು ದುಡಿಯುತ್ತಿರುವ ಡಾ. ರಾಜಕುಮಾರ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ಸಾರಥಿಯಾಗಿದ್ದಾರೆ. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಇದೇ ವೇಳೆ ಅಭ್ಯರ್ಥಿ ಡಾ. ರಾಜಕುಮಾರ ಹೆಬ್ಬಾಳೆ, ರಮೇಶ ಮಠಪತಿ, ಡಾ. ಸೋಮನಾಥ ಯಾಳವಾರ, ವಸಂತ ಹುಣಸನಾಳೆ, ಜೈರಾಜ ಖಂಡ್ರೆ, ಸಿ.ಎಸ್.ಗಣಾಚಾರಿ, ಉಮಾಕಾಂತ ಮೀಸೆ, ರಾಮಕೃಷ್ಣನ್ ಸಾಳೆ, ಪ್ರಕಾಶ ಲಕ್ಕಶೆಟ್ಟಿ, ವೈಜಿನಾಥ ಕಮಠಾಣೆ, ಪ್ರೊ. ಅಶೋಕ ಮೈನಾಳೆ, ಸೂರ್ಯಕಾಂತ ವಲ್ಲೆಪುರೆ, ಶಂಭುಲಿಂಗ ಕಾಮಣ್ಣ, ಕಾಶಪ್ಪ ಬಾಲಕಿಲೆ, ಎಚ್.ಕಾಶಿನಾಥರೆಡ್ಡಿ, ಡಾ. ಬಸವರಾಜ ಸ್ವಾಮಿ, ಪ್ರೊ. ಎಸ್.ಬಿ.ಬಿರಾದಾರ, ಸಂಜೀವಕುಮಾರ ಜುಮ್ಮಾ, ಸಂಗನಬಸವ ಶಿವಪುತ್ರ, ಚನ್ನಬಸಪ್ಪ ಬಿರಾದಾರ, ಬಸವರಾಜ ಮಠಪತಿ, ಶಿವರಾಜ ಬಾಲಕಿಲೆ, ಶರದ ನಾರಾಯಣಪೇಟಕರ್, ಶಿವಾನಂದ ಗುಂದಗಿ, ಕಾಶಿನಾಥ ರಾಠೋಡ್, ಶಿವರಾಜ ರೊಟ್ಟೆ, ರವೀಂದ್ರ ಲಕ್ಕಶೆಟ್ಟಿ, ಪ್ರಕಾಶ ಕನ್ನಾಳೆ, ಅಶೋಕ ಅಷ್ಟೂರೆ, ಶರಣಪ್ಪ ಚಿಟಮೆ, ರಮೇಶ ಡೊಣಗಾಪುರೆ, ಶ್ರೀಕಾಂತ ಸ್ವಾಮಿ ಬೋರಗಿ, ಚಂದ್ರಶೇಖರ ಹೆಬ್ಬಾಳೆ, ಡಾ. ಜಗನ್ನಾಥ ಹೆಬ್ಬಾಳೆ, ಡಾ. ಮಹಾನಂದ ಮಡಕಿ, ಶ್ರೀಕಾಂತ ಪಾಟೀಲ, ಡಾ. ಸುನಿತಾ ಕೂಡ್ಲಿಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.