ಹಿರಿಯ ಶಾಸಕ ಉದಾಸಿ ನಿಧನ: ಸಿಎಂ ಸೇರಿ ಗಣ್ಯರ‌ ಸಂತಾಪ

ಬೆಂಗಳೂರು, ಜೂ.8- ಹಾನಗಲ್ ಕ್ಷೇತ್ರದ ಹಿರಿಯ ಶಾಸಕ ಸಿ.ಎಂ.ಉದಾಸಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‌ಸೇರಿದಂತೆ ಅನೇಕ ನಾಯಕರು ತೀವ್ರ ಸಂತಾಪ‌ವ್ಯಕ್ತಪಡಿಸಿ ಅಗಲಿದ ನಾಯಕನ ಗುಣಗಾನ ಮಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲದೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಸೇರಿ ಹಲವು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸಂತಾಪ ಸೂಚಕದಲ್ಲಿ ಅಭಿವೃದ್ಧಿ ಪರ ಚಿಂತಕರಾಗಿದ್ದ ಸಿಎಂ ಉದಾಸಿ ಅವರು ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ, ಆ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು.
ಅವರ ನಿಧನದಿಂದ ಅಪರೂಪದ ನೇತಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ ಎಂದಿದ್ದಾರೆ.

ಸಜ್ಜನ ರಾಜಕಾರಣಿ

ಶಾಸಕರಾಗಿದ್ದ ಸಿ.ಎಂ.ಉದಾಸಿ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಉಳ್ಳ ಕ್ರಿಯಾಶೀಲ ರಾಜಕಾರಣಿ. ಈ ಹಿಂದೆ ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ಉತ್ತಮವಾದ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಪರ ಚಿಂತಕರಾಗಿದ್ದ ಅವರು ಜನಪ್ರಿಯ ನಾಯಕರಾಗಿದ್ದರು.
ಅವರ ನಿಧನದಿಂದ ಅಪರೂಪದ ಸಜ್ಜನಿಕೆಯ ನೇತಾರರೊಬ್ಬರನ್ನು ರಾಜ್ಯ ಕಳೆದುಕೊಂಡಂತಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ‌ ಸಂತಾಪ ಸೂಚಿಸಿದ್ದರು.

ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಅವರ ಕುಟುಂಬದವರಿಗೆ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ತಿಳಿಸಿದ್ದಾರೆ

ರಾಜಕೀಯ ಮುತ್ಸದ್ದಿ

ಸಿ ಎಂ ಉದಾಸಿ ಅವರು ನಮ್ಮನ್ನೆಲ್ಲ ಅಗಲಿದ ಸುದ್ದಿ ತಿಳಿದು ತೀವ್ರ ದುಃಖವಾಯ್ತು.ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ, ಹಾಗೂ ಅಭಿಮಾನಿ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ತೀವ್ರ, ಸಂತಾಪ ಸೂಚಿಸಿದ್ದಾರೆ.

ಹಿರಿಯ ನಾಯಕನ ಅಗಲಿಕೆ:

ಹಿರಿಯ ನಾಯಕ ಸಿ.ಎಂ ದಾಸಿ ಅವರನ್ನು ಕಳೆದುಕೊಂಡು ಹಾವೇರಿ ಜಿಲ್ಲೆ ಹಾಗು ನಾಡು ಬಡವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಂತಾಪ‌ಸೂಚಿಸಿದ್ದಾರೆ.

ತಮಗೆ ಮಾರ್ಗದರ್ಶಕರಾಗಿದ್ದರು.ಅವರ ನಿಧನದಿಂದ ನೋವಾಗಿದೆ ಎಂದಿದ್ದಾರೆ.

ಅನುಕರಣೀಯ ಕೆಲಸ

ಹಾವೇರಿ ಜಿಲ್ಲೆಯ ಹಾನಗಲ್ ಶಾಸಕ ಹಾಗೂ ಲೋಕೋಪಯೋಗಿ ಖಾತೆಯ ಮಾಜಿ ಸಚಿವರಾಗಿ ಸಿ.ಎಂ. ಉದಾಸಿ ಅವರ ನಿಧನಕ್ಕೆ ಸಣ್ಣ ಕೈಗಾರಿಕಾ ಹಾಗೂ ವಾರ್ತಾ ಸಚಿವ ಸಿ.ಸಿ ಪಾಟೀಲ್ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಸಿ ಎಂ ಉದಾಸಿ ಅವರು ಲೋಕೋಪಯೋಗಿ ಇಲಾಖಾ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ವಿಶೇಷವಾಗಿ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣ ಮತ್ತು ಸುಧಾರಣೆಗೆ ಕೈಗೊಂಡ ಕ್ರಮಗಳು ಅನುಕರಣೀಯ ಮತ್ತು ಅಭಿನಂದನೀಯ ಎಂಬ ಪ್ರಶಂಸೆಗಳ ಸುರಿಮಳೆಯನ್ನೇ ಗಳಿಸಿದ್ದರು ಎಂದು ಸಿ.ಸಿ. ಪಾಟೀಲ್ ಅವರು ಬಣ್ಣಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಾವೇರಿ ಜಿಲ್ಲೆಯಲ್ಲಿ ಅತ್ಯದ್ಬುತ ಕಟ್ಟಡವನ್ನು ನಿರ್ಮಿಸಿಕೊಟ್ಟ ಕೀರ್ತಿ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ ಅವರಿಗೆ ಸಲ್ಲಬೇಕು ಎಂದೂ ಹೇಳಿದ್ದಾರೆ.

ಪ್ರಭಲ ನಾಯಕ

ಸಿಎಂ ಉದಾಸಿ ಅವರು ಉತ್ತರ ಕರ್ನಾಟಕದ ಅತ್ಯಂತ ಪ್ರಬಲ ಜನ ನಾಯಕರಾಗಿದ್ದರು. ಹಾವೇರಿ ಜಿಲ್ಲೆ, ಹಾನಗಲ್ಲಿನ ಅಣ್ಣಾ ಎಂದೆ ಪ್ರಖ್ಯಾತರಾಗಿದ್ದ ಸಿ ಎಂ ಉದಾಸಿ, ನಾವು ಕಂಡ ಅತ್ಯಂತ ಸರಳ, ಸಜ್ಜನ ರಾಜಕಾರಣಿಯಾಗಿದ್ದರು. ಲೋಕೋಪಯೋಗಿ ಸಚಿವ ರಾಗಿ ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದ ಅವರು, ಇಳಿವಯಸ್ಸಿನಲ್ಲಿಯೂ ಶಾಸಕರಾಗಿ ತಮ್ಮ ಕ್ಷೇತ್ರದ ಜನಹಿತಕ್ಕಾಗಿ ದುಡಿಯುತ್ತಿದ್ದರು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ರೈತಾಪಿ ಕುಟುಂಬದಿಂದ ಬಂದ ಅವರು ಅಂತಃಕರಣ ಉಳ್ಳ ವ್ಯಕ್ತಿಯಾಗಿದ್ದರು. ನನ್ನ ಜೊತೆ ಒಳ್ಳೆಯ ಸ್ನೇಹ ಹೊಂದಿದ್ದ ಅವರು ಅನೇಕ ಸಮಿತಿಗಳಲ್ಲಿ ನನ್ನೊಂದಿಗೆ ಭಾಗವಹಿಸಿ ಸಲಹೆ ಸೂಚನೆ ಕೊಡುತ್ತಿದ್ದರು.ಏಳು ಭಾಷೆಗಳನ್ನು ಬಲ್ಲ ಉದಾಸಿ ಅವರು ಯಾರ ಮನಸ್ಸನ್ನು ನೋಯಿಸದ ಮೃದು ಸ್ವಭಾವದ ವ್ಯಕ್ತಿ ಎಂದಿದ್ದಾರೆ

ಬೇಸರದ ಸಂಗತಿ

ಶಾಸಕ ಸಿಎಂ’ಉದಾಸಿ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಅವರೊಬ್ಬ ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿ. ಮಿತಭಾಷಿ ಹಾಗೂ ಸಾತ್ವಿಕ ಮನೋಭಾವದವರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

1983 ರಲ್ಲಿ ಶಾಸನಸಭೆ ಪ್ರವೇಶಿಸಿದ ಅವರು ಆರು ಬಾರಿ ಶಾಸಕರಾಗಿದ್ದರು. ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಜನಸೇವೆಗೆ ಸದಾ ತುಡಿಯುತ್ತಿದ್ದ ಅವರು ಕಿರಿಯರಿಗೆ ಮಾರ್ಗದರ್ಶಕರು, ಮಾದರಿಯೂ ಆಗಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಬಂಧು-ಬಳಗವರು, ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ

ಅಪರೂಪದ ನೇತಾರನನ್ನು ಕಳೆದುಕೊಂಡಿದ್ದೇವೆ

ಸಿಎಂ ಉದಾಸಿ ಅವರ ನಿಧನದಿಂದ ಅಪರೂಪದ ನೇತಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ ಎಂದು‌ಬಿಜೆಪಿ ಅದ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿಯಾಗಿದ್ದರು. ಅವರು ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅಭಿವೃದ್ಧಿ ಪರ ಚಿಂತಕರಾಗಿದ್ದ ಅವರು ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು, ಆ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು ಎಂದು ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ..