ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಪ್ರತಿಭಾ ಪುರಸ್ಕಾರ

ಹುಳಿಯಾರು, ಜು. ೧೧- ಕನಕದಾಸ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ೨೦೨೨-೨೩ ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದ್ವಿತೀಯ ಪಿಯುಸಿಯಲ್ಲಿ ೬೦೦ ಕ್ಕೆ ೫೮೪ ಅಂಕಗಳನ್ನು ಪಡೆದು ತುಮಕೂರು ಜಿಲ್ಲೆಗೆ ವಿಜ್ಞಾನ ವಿಭಾಗದಲ್ಲಿ ೫ ನೇ ಸ್ಥಾನ ಪಡೆದ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹೆಚ್.ದಿವ್ಯ ಅವರನ್ನು ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿಯಲ್ಲಿ ೬೨೫ ಅಂಕಗಳಿಗೆ ೬೨೫ ಅಂಕಗಳನ್ನು ಪಡೆಯುವ ಮೂಲಕ ರಾಜ್ಯ ಟಾಪರ್ ಆಗಿ ಹೊರಹೊಮ್ಮಿದ್ದ ಹುಳಿಯಾರು ಹೋಬಳಿಯ ಯಳನಾಡು ಸರ್ಕಾರಿ ಶಾಲೆಯ ಬಿ.ಆರ್.ಭೂಮಿಕಾ ಅವರನ್ನು ಅಭಿನಂದಿಸಲಾಯಿತು.
ಕನಕದಾಸ ಪದವಿ ಪೂರ್ವ ಕಾಲೇಜಿನಲ್ಲಿ ಹೆಚ್ಚು ಅಂಕಗಳನ್ನು ಪಡೆದ ಮೇಘನಾ, ಸಂದೀಪ್ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಶ್ರೀನಿವಾಸ್, ಮನೋಜ್ ಅವರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಅಲ್ಲದೆ ಶಿಕ್ಷಕರ ಕಲ್ಯಾಣ ನಿಧಿಯಿಂದ ಜೆ.ವಿ.ಸುಹಾಸ್, ವಿ.ಕೆ.ಯಶ್ವಂತ್, ಮನುಪ್ರಸಾದ್, ಜಾನಕಮ್ಮ, ಶ್ರೀನಿವಾಸ್ ಅವರಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಕಾರ್ಯಕ್ರಮವನ್ನು ಕನಕದಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶಿವಪ್ರಕಾಶ್ ಉದ್ಘಾಟಿಸಿದರು. ಪ್ರೌಢಶಾಲೆಯ ಮುಖ್ಯಶಿಕ್ಷಕ ಟಿ.ಎಸ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಪರಮೇಶ್ವರಪ್ಪ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಲ್ಲೇಶಪ್ಪ, ಹಿರಿಯರಾದ ನಾರಾಯಣಪ್ಪ, ಹಿರಿಯ ವಿದ್ಯಾರ್ಥಿಗಳ ಸಂಘದ ಬಾಲಾಜಿ, ಪ್ರದೀಪ್, ಕುಮಾರಸ್ವಾಮಿ, ಪುಷ್ಪಾಲತಾ, ಎಚ್.ಡಿ.ದುರ್ಗರಾಜು, ತ್ಯಾಗರಾಜು, ಓಂಕಾರಮೂರ್ತಿ, ಪ್ರಕಾಶ್, ಮುದ್ದಲಿಂಗಯ್ಯ ಉಪಸ್ಥಿತರಿದ್ದರು.