ಹಿರಿಯ ರಂಗ ಪೋಷಕ ಪಾಂಡ್ರೆ, ರಂಗ ಕಲಾವಿದ ಚಿಮಕೋಡೆಯವರಿಗೆ ಸಿ.ಜಿ.ಕೆ. ಪ್ರಶಸ್ತಿ ಪ್ರದಾನ

ಬೀದರ್:ಜು.6: ಜಾನಪದ ಕಲಾವಿದರ ಬಳಗ ಬೀದರ ಇವರ ಸಹಯೋಗದಿಂದ ಕರ್ನಾಟಕ ಬೀದಿನಾಟಕ ಅಕಾಡೆಮಿ ಬೆಂಗಳೂರು ವತಿಯಿಂದ ಬೀದರ ನಗರÀದಲ್ಲಿ ರವಿವಾರ ರಾತ್ರಿ ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ಬೀದರ ಜಿಲ್ಲೆಯ ಹಿರಿಯ ರಂಗ ಪೋಷಕ ನಾಗೇಂದ್ರ ಪಾಂಡ್ರೆ ಅವರಿಗೆ 2022ನೇ ಸಾಲಿನ ಹಾಗೂ ಹಿರಿಯ ರಂಗ ಕಲಾವಿದ ದೇವದಾಸ ಚಿಮಕೋಡೆ ಅವರಿಗೆ 2023 ನೇ ಸಾಲಿನ ಸಿ.ಜಿ.ಕೆ. ರಂಗ ಪುರಸ್ಕಾರ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ನಂತರ ಮಾತನಾಡಿದ ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು, ಬೀದರ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನಶೀಸಿ ಹೋಗುತ್ತಿರುವ ಜನಪದ ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿಕೊಂಡು ಬರುತ್ತಿರುವ ಹಿರಿಯ ರಂಗ ಪೋಷಕ ನಾಗೇಂದ್ರ ಪಾಂಡ್ರೆ ಹಾಗೂ ರಂಗ ಕಲಾವಿದ ದೇವದಾಸ ಚಿಮಕೋಡೆ ಅವರನ್ನು ಗುರುತಿಸಿ ವಿಜಯಕುಮಾರ ಸೋನಾರೆಯವರ ತಂಡ ಎಲೆಮರೆ ಕಾಯಿಯಂತಿರುವ ಬೀದರ ಜಿಲ್ಲೆಯ ಹಿರಿಯ ಜನಪದ ಕಲಾವಿದರಿಗೆ ಸಿ.ಜಿ.ಕೆ. ಪ್ರಶಸ್ತಿ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

2022ನೇ ಸಾಲಿನ ಸಿ.ಜಿ.ಕೆ. ಪ್ರಶಸ್ತಿ ಪಡೆದ ಬೀದರ ನಗರದ ಬ್ರಹ್ಮನವಾಡಿಯ 80 ವರ್ಷದ ನಾಗೇಂದ್ರ ಪಾಂಡ್ರೆಯವರು ಮಾತನಾಡುತ್ತ, ಕಳೆದ 70 ವರ್ಷದಿಂದ ನಾಟಕಗಳಲ್ಲಿ ಪಾತ್ರ ಮಾಡುವ ಕಲಾವಿದರಿಗೆ ಬೇಕಾಗುವ ವಿವಿಧ ರೀತಿಯ ವೇಷ-ಭೂಷಣಗಳು ಬಾಡಿಗೆ ನೀಡುತ್ತಿದ್ದೇನೆ. ಪೌರಾಣಿಕ, ಸಾಮಾಜಿಕ, ಐತಿಹಾಸಿಕ ನಾಟಕಗಳಲ್ಲಿ ಪಾತ್ರಗಳು ಮಾಡುವ ಕಲಾವಿದರಿಗೆ ಬೇಕಾಗುವ ವಿವಿಧ ರೀತಿಯ ವೇಷ-ಭೂಷಣ ಬಾಡಿಗೆ ಕೊಡುತ್ತೇನೆ. ಕಲಾವಿದರು ಕೊಟ್ಟಷ್ಟು ಹಣ ಪಡೆಯುತ್ತೇನೆ. ನನ್ನ ತಂದೆಯವರಾದ ದೇವಜಿರಾವ ಅವರು ನಾಟಕಗಳ ಪಾತ್ರ ಮಾಡುವ ಕಲಾವಿದರಿಗೆ ಬಾಡಿಗೆ ವಿವಿಧ ರೀತಿಯ ವೇಷ-ಭೂಷಣದ ಬಟ್ಟೆಗಳು ಕೊಡುತ್ತಿದ್ದರು. ನನ್ನ ತಂದೆಯವರು ನಡೆಸಿಕೊಂಡು ಬಂದ ಕಾಯಕವನ್ನು ಮುಂದುವರೆಸಿಕೊಂಡು ಬರುತ್ತಿದ್ದೇನೆ. ನನ್ನ ತಂದೆಯ ಕಾಲದಿಂದ ಸುಮಾರು 100 ವರ್ಷದ ಕಲಾವಿದರ ಪಾತ್ರಗಳ ವಿವಿಧ ರೀತಿಯ ವೇಷ-ಭೂಷಣ ಬಟ್ಟೆಗಳು ನನ್ನ ಬಳಿಯಿವೆ. ನನ್ನ ರಂಗ ಪೋಷಕ ಸೇವೆಯನ್ನು ಗುರುತಿಸಿ ಯಾವುದೇ ಅರ್ಜಿ ಹಾಕದ ನನ್ನಗೆ ಸಿ.ಜಿ.ಕೆ. ಪ್ರಶಸ್ತಿ ನೀಡುತ್ತಿರುವುದು ನನ್ನಗೆ ಬಹಳ ಸಂತೋಷವಾಗಿದೆ ಎಂದು ಹೇಳಿದರು.

2023ನೇ ಸಾಲಿನ ಸಿ.ಜಿ.ಕೆ. ಪ್ರಶಸ್ತಿ ಪಡೆದ ಬೀದರ ತಾಲೂಕಿನ ಚಿಮಕೋಡ ಗ್ರಾಮದ ಬೀದರ ಜಿಲ್ಲೆಯ ಹಿರಿಯ ರಂಗ ಕಲಾವಿದ ದೇವಿದಾಸ ಚಿಮಕೋಡೆಯವರು ಮಾತನಾಡುತ್ತ, ನಾನೂ ಕಳೆದ 33 ವರ್ಷಗಳಿಂದ ಬೀದರ ಜಿಲ್ಲೆಯಲ್ಲಿ ಬೀದಿ ನಾಟಕ, ಜನಪದ ಕಲೆ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಸಿ.ಜಿ.ಕೆ. ಪ್ರಶಸ್ತಿ ನೀಡಿರುವುದು ನನಗೆ ಬಹಳ ಆನಂದವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಾನಪದ ಕಲಾವಿದರ ಬಳಗದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ, ಸುನೀಲ ಭಾವಿಕಟ್ಟಿ, ಪ್ರದೀಪ್ ಬಿರಾದಾರ್, ವಿಜಯಕುಮಾರ ಅಷ್ಟೂರೆ, ಪ್ರಥ್ವಿರಾಜ್.ಎಸ್, ಸುನೀಲಕುಮಾರ ಕುಲಕರ್ಣಿ, ಚಂದ್ರಕಾಂತ ಹಳ್ಳಿಖೇಡಕರ್, ಮಹೇಶ ಕೋಲಿ, ಸಂತೋಷ ಹೊನ್ನಡ್ಡಿ ಅವರು ಸೇರಿದಂತೆ ಮತ್ತಿತರರಿದ್ದರು ಇದ್ದರು.