ಹಿರಿಯ ಪತ್ರಕರ್ತ ಸುರೇಶ್ಚಂದ್ರ ನಿಧನ


ಬೆಂಗಳೂರು, ಜೂ.೧೧- ಹಿರಿಯ ಪತ್ರಕರ್ತ ಲಿಂಗೇನಹಳ್ಳಿ ಸುರೇಶ್ಚಂದ್ರರವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಕೋವಿಡ್ – ೧೯ ಸೋಂಕಿನಿಂದ ಬಳಲುತ್ತಿದ್ದ ಎಲ್.ಎಚ್. ಸುರೇಶ್ಚಂದ್ರ ಅವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ.
’ಸಂಜೆವಾಣಿ’ ಹಾಗೂ ಕೆಲದಿನಗಳ ಕಾಲ ’ಈ ಸಂಜೆ’ಯಲ್ಲಿ ಸೇವೆ ಸಲ್ಲಿಸಿದ್ದ ಸುರೇಶ್ಚಂದ್ರರವರು ಕೆಲವು ಚಲನಚಿತ್ರಗಳಲ್ಲೂ ಅಭಿನಯಿಸಿ ಜನಮನಗೆದ್ದಿದ್ದರು. ನಾಟಕ, ಸಾಹಿತ್ಯ, ಸಂಗೀತ ಅದರಲ್ಲೂ ಭಾವಗೀತೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಸುರೇಶ್ಚಂದ್ರರವರು ಸಂಜೆವಾಣಿ ಬೆಂಗಳೂರಿನಲ್ಲಿ ಪ್ರಾರಂಭವಾದ ದಿನದಿಂದಲೂ ಸೇವೆ ಸಲ್ಲಿಸಿದ್ದರು.
ಈ ಮಧ್ಯೆ ಈ ಸಂಜೆಯಲ್ಲಿ ಸೇವೆ ಸಲ್ಲಿಸಿ ಮತ್ತೆ ಸಂಜೆವಾಣಿಗೆ ಹಿಂತಿರುಗಿ ಸಂಪಾದಕರಾಗಿ ೨೦೧೯ರವರೆಗೂ ಸೇವೆ ಸಲ್ಲಿಸಿ, ನಿವೃತ್ತಿಯಾಗಿದ್ದರು. ಸಂಜೆವಾಣಿ ಹೊರತರುತ್ತಿದ್ದ ಚಂದನ ಮಾಸಿಕ ಪತ್ರಿಕೆಯಲ್ಲಿ ನರಹಂತಕ ವೀರಪ್ಪನ್ ಕುರಿತಂತೆ ಸುರೇಶ್ಚಂದ್ರರವರು ಬರೆಯುತ್ತಿದ್ದ ಲೇಖನ ಹೆಚ್ಚು ಜನಪ್ರಿಯವಾಯಿತು.
ಕಾಡುಗಳ್ಳ ವೀರಪ್ಪನ್‌ನ ಹುಟ್ಟು, ಬದುಕು, ಕಾರುಗಳ್ಳನಾಗಿ ಮಾರ್ಪಾಡಾದ ವಿವರಗಳನ್ನೆಲ್ಲಾ ಸಂಗ್ರಹಿಸಿ, ಬರೆಯುತ್ತಿದ್ದ ಅವರ ಅಂಕಣ ಹೆಚ್ಚು ಜನಪ್ರಿಯವಾಯಿತು. ಪೊಲೀಸರಿಗೂ ಸಿಗದ ಮಾಹಿತಿಯನ್ನು ಹೆಕ್ಕಿ ತೆಗೆಯುವಲ್ಲಿ ನಿಸ್ಸೀಮರಾಗಿದ್ದರು.
ಮೃತರು, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸುರೇಶ್ಚಂದ್ರರವರ ನಿಧನಕ್ಕೆ ಸಂಜೆವಾಣಿ ಬಳಗ ಕಂಬನಿ ಮಿಡಿದು, ಮೃತರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದೆ. ಮೃತರ ಅಂತ್ಯಕ್ರಿಯೆ ಮಧುಗಿರಿ ತಾಲ್ಲೂಕಿನ ಲಿಂಗೇನಹಳ್ಳಿಯಲ್ಲಿ ಇಂದು ಸಂಜೆ ನಡೆಯಲಿದೆ.