ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್ ನಿಧನ: ಗಣ್ಯರ ಸಂತಾಪ

ಬೆಂಗಳೂರು,ಜು.2- ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಮತ್ತು ಪ್ರದರ್ಶಕ  ಕೆಸಿಎನ್​ ಮೋಹನ್​ ಅನಾರೋಗ್ಯದಿಂದಾಗಿ ಇಂದು   ನಿಧನರಾಗಿದ್ದಾರೆ.

ಅವರಿಗೆ 61 ವರ್ಷ ವಯಸ್ಸಾಗಿತ್ತು. ಹಿರಿಯ ನಿರ್ಮಾಪಕ ಕೆ ಸಿ ಎನ್ ಗೌಡ ಅವರ ಪುತ್ರರೂ ಆಗಿದ್ದಾರೆ.

ಮೂತ್ರಪಿಂಡ ಮತ್ತು ಪಿತ್ತಜನಕಾಂಗ ಸಮಸ್ಯೆಯಿಂದ ಬಳಲುತ್ತಿದ್ದ ಕೆಸಿಎನ್ ಮೋಹನ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ

ನವರಂಗ್​, ಊರ್ವಶಿ ಚಿತ್ರಮಂದಿರಗಳ ಮಾಲೀಕರಾಗಿದ್ದ ಅವರು ಪ್ರದರ್ಶಕರಾಗಿ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದರು. ಇತ್ತೀಚೆಗೆ ಮೋಹನ್​ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ವೈಫಲ್ಯ ಸೇರಿದಂತೆ ವಿವಿಧ ಸಮಸ್ಯೆಯಿಂದ ಬಳಲುತ್ತಿದ್ದ ಕೆಸಿಎನ್​ ಮೋಹನ್​ ನಿಧನರಾಗಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಕೆಸಿಎನ್ ಮೋಹನ್ ಅವರ ಪತ್ತಿ ನಿರ್ದೇಶಕಿವಾಗಿದ್ದ ಪೂರ್ಣಿಮಾ ಅವರು ನಿಧನರಾಗಿದ್ದರು. ಇದೀಗ ಮೋಹನ್ ಅವರು ಕೂಡ ನಿಧನರಾಗಿದ್ದಾರೆ.

ಕೆಸಿಎನ್ ಮೋಹನ್ ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಮತ್ತು ಚಿತ್ರರಂಗದ ಅನೇಕ ಮಂದಿಯನ್ನು ಅಗಲಿದ್ದಾರೆ

ಸಂತಾಪ:

ನಿರ್ಮಾಪಕ ಹಾಗೂ ಪ್ರದರ್ಶಕರು ಆಗಿದ್ದ ಕೆಸಿಎನ್ ಮೋಹನ್ ಅವರ ನಿಧನಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ನಿರ್ಮಾಪಕರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.